'ಲಾಫಿಂಗ್ ಬುದ್ಧ' ಚಿತ್ರದ ಮೂಲಕ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದ ಪ್ರಮೋದ್ ಶೆಟ್ಟಿ ಅವರೀಗ 'ಜಲಂಧರ' ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ನವೆಂಬರ್ 29ಕ್ಕೆ ಬಿಡುಗಡೆಯಾಗಲಿದೆ.
ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಭೂಮಿಯ ಹಿನ್ನೆಲೆ ಇರುವ ಸ್ಟೆಪ್ ಅಪ್ ಲೋಕಿ ಅಭಿನಯಿಸಿದ್ದಾರೆ. ಲೋಕಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜೊತೆಗೆ ಟಗರು ಚಿತ್ರದಲ್ಲಿ ಕಾನ್ಸ್ಟೇಬಲ್ ಪಾತ್ರದ ಮೂಲಕ ಗಮನ ಸೆಳೆದಿದ್ದ ಸರೋಜಾ ಖ್ಯಾತಿಯ ನಟಿ ಋಷಿಕಾ ರಾಜ್, ಅಧ್ಯಕ್ಷ ಖ್ಯಾತಿಯ ನಟಿ ಆರೋಹಿತಾ ಗೌಡ ನಟಿಸಿದ್ದಾರೆ. ಇವರ ಜೊತೆ ಬಲರಾಜ್ ವಾಡಿ, ರಘು ರಾಮನಕೊಪ್ಪ, ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ, ವಿಜಯರಾಜ್, ಪ್ರಸಾದ್ ಮತ್ತು ಅಂಬು ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಹಲವು ಚಿತ್ರಗಳಲ್ಲಿ ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ವಿಷ್ಣು ವಿ ಪ್ರಸನ್ನ ಅವರು ಈ ಜಲಂಧರ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಶ್ಯಾಮ್ ಸುಂದರ್ ಮತ್ತು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ. ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ.ಎಸ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಯುವ ಸಂಗೀತ ನಿರ್ದೇಶಕ ಜಿ. ಜತಿನ್ ದರ್ಶನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅನುಭವಿ ಫಿಲಂ ಎಡಿಟರ್ ವೆಂಕಿ ಯು ಡಿ ವಿ ಕತ್ತರಿ ಪ್ರಯೋಗ ಮಾಡಿದ್ದಾರೆ.
ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹೂಡಿ ಚಂದ್ರಮೋಹನ್, ಸಿ ಎಲ್ ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ಸಹನಿರ್ಮಾಪಕರಾಗಿದ್ದಾರೆ.
Advertisement