ಸತ್ಯ ಪ್ರಕಾಶ್ ನಿರ್ದೇಶನದ X & Y ಸಿನಿಮಾದ ಆ್ಯಂಬು ಆಟೋ ಎಲ್ಲರ ಗಮನ ಸೆಳೆಯುತ್ತಿದ್ದು, ಬಿಡುಗಡೆಗೂ ಮುನ್ನವೇ ಚಿತ್ರತಂಡ ಆಟೋ ಚಾಲಕರ ಮನಗೆದ್ದಿದೆ.
ಚಿತ್ರತಂಡ ಪಾತ್ರದ ಮೂಲಕ ಆಟೋಗೂ ಜೀವ ನೀಡುವ ಕೆಲಸ ಮಾಡಿದೆ. ಸಾಮಾನ್ಯ ಆಟೋರಿಕ್ಷಾ ಈ ಸಿನಿಮಾದಲ್ಲಿ ‘ಆ್ಯಂಬುಲೆನ್ಸ್ ಆಟೋ’ ಆಗಿ ಬಡ್ತಿ ಪಡೆದು, ತನ್ನ ಆಕರ್ಷಕ ರೂಪಾಂತರದಿಂದ ಪ್ರೇಕ್ಷಕರ ಮನ ಸೆಳೆಯುತ್ತಿದೆ.
ಆ್ಯಂಬುಲೆನ್ಸ್ ನಲ್ಲಿರುವಂತೆ ಎಲ್ಲಾ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ, ಚಿತ್ರದಲ್ಲಿ ಅದನ್ನೊಂದು ಕಲಾವಿದನೆಂಬಂತೆ ಕಲಾತ್ಮಕವಾಗಿ ಬಳಸಲಾಗಿದೆ.
ನಿರ್ದೇಶಕರ ಈ ಆ್ಯಂಬು ಆಟೋ ಪರಿಕಲ್ಪನೆಯು ಬೆಂಗಳೂರಿನ ಆಟೋರಿಕ್ಷಾ ಚಾಲಕರ ಮನಗೆದ್ದಿದೆ. ಹಲವಾರು ಚಾಲಕ ಸಂಘಗಳು ಇತ್ತೀಚೆಗೆ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು, ಆ್ಯಂಬು ಆಟೋ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆಟೋರಿಕ್ಷಾ ನಮಗೆ ವಾಹನಕ್ಕಿಂತ ಹೆಚ್ಚೆಂದೇ ಭಾವಿಸುತ್ತೇವೆ. ಅದು ನಮ್ಮ ಒಡನಾಡಿ. ಕನ್ನಡ ಚಿತ್ರರಂಗ ಯಾವಾಗಲೂ ಆಟೋ ರಿಕ್ಷಾಗೆ ಜೀವ ನೀಡುತ್ತದೆ. ಶಂಕರ್ ಅವರಂತಹ ದೊಡ್ಡ ಕಲಾವಿದರು ತೆರೆ ಮೇಲೆ ತರುವ ಮೂಲಕ ಅದಕ್ಕೆ ಜೀವ ನೀಡಿದ್ದರು. ಆದರೆ, ಆಟೋ ಆ್ಯಂಬುಲೆನ್ಸ್ ಕಲ್ಪನೆ ನಿಜಕ್ಕೂ ವಿಶಿಷ್ಟವಾದದ್ದು ಎಂದು ಚಾಲಕರೊಬ್ಬರು ಹೇಳಿದ್ದಾರೆ.
ʼX&Yʼ ಸತ್ಯ ಪ್ರಕಾಶ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದ್ದು, ಮೊದಲ ಮೂರು ಚಿತ್ರಗಳು ʼರಾಮಾ ರಾಮಾ ರೇʼ, ʼಒಂದಲ್ಲಾ ಎರಡಲ್ಲಾʼ ಮತ್ತು ʼಮ್ಯಾನ್ ಆಫ್ ದಿ ಮ್ಯಾಚ್ʼ ಒಂದಕ್ಕಿಂತ ಒಂದು ಭಿನ್ನ ಕಥಾ ಮಾಲಿಕೆಯ ಚಿತ್ರಗಳಾಗಿವೆ.
ʼರಾಮ ರಾಮಾ ರೇʼ ಉತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದರೆ, ಒಂದಲ್ಲಾ ಎರಡಲ್ಲಾ ಚಿತ್ರವು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸದ್ಯ ಫಸ್ಟ್ ಲುಕ್ ನಿಂದ ಕುತೂಹಲ ಹುಟ್ಟಿಸಿರೋ ಈ ಚಿತ್ರ ಮಕ್ಕಳ ಸಂತಾನ ಹಾಗೂ ಹಾರ್ಮೋನ್ಸ್ ಬಗೆಗಿನ ಕಥಾಹಂದರವನ್ನು ಒಳಗೊಂಡಿದೆ. ಬಹುತೇಕ ಶೂಟಿಂಗ್ ಮುಗಿಸಿರೋ ಈ ಚಿತ್ರ ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ʼX&Yʼ ಚಿತ್ರಕ್ಕೆ ವಾಸುಕಿ-ವೈಭವ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ, ಬಿಎಸ್ ಕೆಂಪರಾಜು ಅವರ ಸಂಕಲನ ಮತ್ತು ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ. ತಾರಾಗಣದಲ್ಲಿ ಅಥರ್ವ ಪ್ರಕಾಶ್, ಬೃಂದಾ ಆಚಾರ್ಯ, ಅಯನಾ, ಸುಂದರ್ ವೀಣಾ, ವೀಣಾ ಸುಂದರ್ ಮತ್ತು ದೊಡ್ಡಣ್ಣ ಮುಂತಾದವರು ನಟಿಸಿದ್ದಾರೆ.
Advertisement