
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಲಾಯರ್ ಜಗದೀಶ್ ಮತ್ತು ನಟಿ ಹಂಸಾ ನಡುವಿನ ಜಗಳ ತಾರಕಕ್ಕೇರಿದ್ದು, ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ನಟಿ ಹಂಸಾ 'ನೀನ್ ಯಾವನೋ' ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಮನೆಯಲ್ಲಿ ರೋಚಕ ಘಟನಾವಳಿಗಳು ನಡೆಯಲಾರಂಭಿಸಿವೆ. ಅದರಲ್ಲೂ ನಟಿ ಹಂಸಾ ಮನೆಯ ಕ್ಯಾಪ್ಟನ್ ಆದ ಬಳಿಕ ಕೆಲ ಸ್ಪರ್ಧಿಗಳಲ್ಲಿ ಅಸಮಾಧಾನ ಉಂಟಾಗಿದ್ದು, ಪ್ರಮುಖವಾಗಿ ಲಾಯರ್ ಜಗದೀಶ್ ನಟಿ ಹಂಸ ವಿರುದ್ಧ ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ವಾರ ತಮ್ಮ ಜಗಳದಿಂದಲೇ ಸುದ್ದಿಯಾಗಿದ್ದ ಲಾಯರ್ ಜಗದೀಶ್ ಇದೀಗ ಚಿಕ್ಕ ಚಿಕ್ಕ ಕಾರಣಕ್ಕೂ ಜಗಳ ಮಾಡಲಾರಂಭಿಸಿದ್ದಾರೆ. ಇದು ಮನೆಯ ಇತರೆ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಇಷ್ಟು ದಿನ ಲಾಯರ್ ಜಗದೀಶ್ ರನ್ನು 'ಸರ್' ಎಂದು ಕರೆಯುತ್ತಿದ್ದ ಸ್ಪರ್ಧಿಗಳು ಇದೀಗ ಏಕವಚನದಲ್ಲೇ ಕರೆಯಲಾರಂಭಿಸಿದ್ದಾರೆ.
ಕ್ಯಾಪ್ಟನ್ ಹಂಸಾ ವಿರುದ್ಧ ಜಗದೀಶ್ ಅಸಮಾಧಾನ
ಮನೆಯ ಕ್ಯಾಪ್ಟನ್ ಆಗಿ ನಟಿ ಹಂಸಾ ಅವರ ಆಯ್ಕೆಯ ಬಗ್ಗೆ ಜಗದೀಶ್ಗೆ ಅಸಮಾಧಾನ ಇದ್ದು, ‘ಹಂಸಾ ಕ್ಯಾಪ್ಟನ್ ಆದರೂ ಅಧಿಕಾರ ನನ್ನದೇ’ ಎಂದು ಜಗದೀಶ್ ಹೇಳಿದ್ದರು. ಈಗ ಆ ಮಾತನ್ನು ನಿಜವಾಗಿಸಲು ಜಗದೀಶ್ ಪ್ರಯತ್ನಿಸುತ್ತಿದ್ದು, ಸಣ್ಣ ಪುಟ್ಟ ವಿಚಾರಗಳಿಗೂ ಲಾಯರ್ ಜಗದೀಶ್ ಹಂಸಾರೊಂದಿಗೆ ಕಿರಿಕ್ ತೆಗೆಯುತ್ತಿದ್ದಾರೆ.
ಸದ್ಯಕ್ಕೆ ಜಗದೀಶ್ ಅವರು ನರಕದಲ್ಲಿ ಇದ್ದು, ಈ ಮೊದಲು ಸ್ವರ್ಗದಲ್ಲಿ ಇದ್ದ ಅವರ ಕೆಲವು ವಸ್ತುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ. ಅದನ್ನೆಲ್ಲ ವಾಪಸ್ ತಂದುಕೊಡುವಂತೆ ಹಂಸಾ ಬಳಿಕ ಆರ್ಡರ್ ಮಾಡಿದ್ದಾರೆ. ಪದೇ ಪದೇ ಅದು ಕೊಡಿ, ಇದು ಕೊಡಿ ಎಂದು ಕೇಳಿದ್ದಕ್ಕೆ ಹಂಸಾಗೆ ಕಿರಿಕಿರಿ ಆಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲಿಂದ ಅದು ವಿಕೋಪಕ್ಕೆ ಹೋಗಿದೆ.
ಸಾಮರ್ಥ್ಯ ಇಲ್ಲ ಎಂದರೆ ಬಿಟ್ಟು ಹೋಗು
ಇದೇ ವೇಳೆ, ‘ನಿನಗೆ ಸಾಮರ್ಥ್ಯ ಇಲ್ಲ ಎಂದರೆ ಬಿಗ್ ಬಾಸ್ಗೆ ಹೇಳು. ನೀನೇನು ಡಾನ್ ಅಲ್ಲ. ಕೆಪಾಸಿಟಿ ಇಲ್ಲ ಎಂದರೆ ರಿಸೈನ್ ಮಾಡಿ ಹೋಗು’ ಎಂದು ಹಂಸಾಗೆ ಜಗದೀಶ್ ಹೇಳಿದ್ದಾರೆ.
'ನೀನ್ ಯಾವನೋ' ಎಂದ ನಟಿ ಹಂಸಾ
ಜಗದೀಶ್ ಮಾತಿಗೆ ಕೆರಳಿದ ನಟಿ ಹಂಸಾ.. ಜಗದೀಶ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ‘ಮನೆಗೆ ಹೋಗು ಅಂತ ಹೇಳೋಕೆ ನೀನು ಯಾವನೋ..’ ಎಂದು ಹಂಸಾ ಅವರು ಏಕವಚನದಲ್ಲಿಯೇ ಬೈಯ್ದಿದ್ದು, ಇದರ ಕುರಿತ ವಿಡಿಯೋ ತುಣುಕು ಕಲರ್ಸ್ ಕನ್ನಡ ಸಾಮಾಜಿಕ ತಾಣ ಖಾತೆಯಲ್ಲಿ ಹರಿದಾಡುತ್ತಿದೆ.
Advertisement