ನಟ ಸುದೀಪ್ ಮ್ಯಾಕ್ಸ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಂದುಕೊಂಡಿದ್ದಕ್ಕಿಂತ ತುಂಬಾ ತಡವಾಗಿ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಅನೂಪ್ ಭಂಡಾರಿ ಅವರ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಬಿಲ್ಲಾ ರಂಗ ಬಾಷಾ ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ನಿರತರಾಗಿದ್ದಾರೆ.ಬಿಲ್ಲಾ ರಂಗ ಭಾಷಾ ಸಿನಿಮಾ ಬಗ್ಗೆ ಹೆಚ್ಚಿನ ಅಪ್ ಡೇಟ್ ಬಂದಿಲ್ಲ.
ಮ್ಯಾಕ್ಸ್ ಹೊರತು ಪಡಿಸಿದರೆ ಸುದೀಪ್ ಕೈಯಲ್ಲಿ ಕೆಲ ಸಿನಿಮಾಗಳಿವೆ. ಅದರಲ್ಲಿ ಯಾವುದು ಮೊದಲು, ಯಾವುದು ನಂತರ, ಎನ್ನುವುದು ಇನ್ನೂ ಸ್ಪಷ್ಟವಾಗದೇ ಇದ್ದರೂ ಮುಂಬರುವ ಚಿತ್ರಗಳ ಲೈನ್ ಅಪ್ ಸುದೀಪ್ ಅಭಿಮಾನಿಗಳನ್ನೂ ತುದಿಗಾಲಿನಲ್ಲಿಯಂತೂ ನಿಲ್ಲಿಸಿದೆ. ಇದರ ನಡುವೆ ಮಫ್ತಿ ಮತ್ತು ಭೈರತಿ ರಣಗಲ್ ಸೂತ್ರಧಾರ ನರ್ತನ್, ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ನರ್ತನ್ ಸ್ವತಃ ಈ ವಿಷಯವನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೃಢಪಡಿಸಿದ್ದಾರೆ. ನಾನು ನವೆಂಬರ್ 15 ರಂದು ಶಿವರಾಜಕುಮಾರ್ ಅವರ ಭೈರತಿ ರಣಗಲ್ ಬಿಡುಗಡೆಗಾಗಿ ಸಿದ್ಧತೆ ನಡೆಸುತ್ತಿದ್ದೇನೆ, ನಾನು ಮತ್ತು ಸುದೀಪ್ ಮಾತುಕತೆ ನಡೆಸಿದ್ದೇವೆ. ಆದರೆ ಅದು ಇನ್ನೂ ಆರಂಭಿಕ ಹಂತದಲ್ಲಿದೆ. ಸುದೀಪ್ ಅವರಂತ ದೊಡ್ಡ ಸ್ಟಾರ್ ಗೆ ಹೊಂದುವಂತಹ ಕಥೆ ರಚಿಸಬೇಕು, ಅದಕ್ಕಾಗಿ ಸರಿಯಾದ ನಿರ್ಮಾಪಕರನ್ನು ಹೊಂದಿಸಬೇಕಾಗಿದೆ ಎಂದು ಹೇಳಿದ್ದಾರೆ.
ಭವಿಷ್ಯದ ಸಹಯೋಗಕ್ಕಾಗಿ ಹಲವಾರು ನಿರ್ಮಾಪಕರು ಪ್ರಸ್ತುತ ಸುದೀಪ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಆದರೆ ಯಾವ ಯೋಜನೆಯು ಫೈನಲ್ ಆಗಿ ನಟ ಮತ್ತು ನಿರ್ದೇಶಕರನ್ನು ಒಟ್ಟಿಗೆ ತರುತ್ತದೆ ಎಂಬುದನ್ನು ನೋಡಬೇಕಾಗಿದೆ. ನರ್ತನ್ ಅವರ ಈ ಹೇಳಿಕೆ ಈಗ ಸುದೀಪ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಸಿನಿಮಾ ಹೇಗಿರಬಹುದು ಎನ್ನುವ ಚರ್ಚೆ ಕೂಡ ಗಾಂಧಿನಗರದಲ್ಲಿ ನಡೆಯುತ್ತಿದೆ. ಭೈರತಿ ರಣಗಲ್ ಚಿತ್ರ ಬಿಡುಗಡೆಯಾದ ನಂತರ ನರ್ತನ್, ಸುದೀಪ್ ಅವರ ಜೊತೆ ಸಿನಿಮಾವನ್ನು ಇಮ್ಮಿಡಿಯೇಟ್ ಆಗಿ ಘೋಷಣೆ ಮಾಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.
Advertisement