
ಸಿಂಗಾಪುರ: ಸಿಂಗಾಪುರದ ಖ್ಯಾತ ತಮಿಳು ಹಾಸ್ಯ ನಟ ಹಾಗೂ ಖ್ಯಾತ ಮಿಮಿಕ್ರಿ ಕಲಾವಿದ “ಸಿಂಗಾಪುರ ಶಿವಾಜಿ” ಎಂದೇ ಖ್ಯಾತಿ ಹೊಂದಿದ್ದ ಅಶೋಕನ್ ಮುನಿಯಾಂಡಿ (60) ಶನಿವಾರ ಸಂಜೆ ಸಮಾರಂಭವೊಂದರಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೂಲಗಳ ಪ್ರಕಾರ ಶನಿವಾರ ಸಿಂಗಾಪುರದಲ್ಲಿ ನಡೆಯುತ್ತಿದ್ದ ಹುಟ್ಟುಹಬ್ಬದ ಸಂತೋಷ ಕೂಟವೊಂದರಲ್ಲಿ ಅಶೋಕನ್ ಮುನಿಯಾಂಡಿ ಅಲಿಯಾಸ್ ಸಿಂಗಾಪುರ ಶಿವಾಜಿ ಸಹ ಕಲಾವಿದೆಯೊಂದಿಗೆ ಪ್ರದರ್ಶನ ನೀಡುತ್ತಿದ್ದರು.
ಈ ಸಂದರ್ಭ ಒಂದು ಹಾಡು ಹಾಡಿ ಚಪ್ಪಾಳೆ ತಟ್ಟುತ್ತಾ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದಾಗ ಒಮ್ಮಿಂದೊಮ್ಮೆಲೆ ಹಠಾತ್ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಪರೀಕ್ಷಿಸಿದಾಗ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ.
ಅಶೋಕ್ ಅಲಿಯಾಸ್ ಸಿಂಗಾಪುರ ಶಿವಾಜಿ ಎಂ.ಜಿ.ಆರ್ ನಟನೆಯನ್ನು ನಕಲಿಸಿ ನಟಿಸುವುದರಲ್ಲಿ ಪ್ರಖ್ಯಾತಿ ಹೊಂದಿದ್ದರು. ಈ ವರೆಗೂ ಅವರು ಇಂತಹ 800ಕ್ಕೂ ಅಧಿಕ ಶೋಗಳನ್ನು ನೀಡಿದ್ದಾರೆ.
ಸಿಂಗಾಪುರ್ ಶಿವಾಜಿ ಪ್ರಖ್ಯಾತಿ ಎಷ್ಟಿತ್ತು ಎಂದರೆ, ಅವರು ತಮ್ಮ ಪ್ರತೀ 30 ನಿಮಿಷಗಳ ಶೋಗೆ ಬರೊಬ್ಬರಿ $456 (38,336 ರೂ)ಚಾರ್ಜ್ ಮಾಡುತ್ತಿದ್ದರಂತೆ. ಅವರ ಪ್ರದರ್ಶನಕ್ಕೆ ಮನಸೋತು ಎಷ್ಟೋ ಅಭಿಮಾನಿಗಳು ಕೂಡ ಸೃಷ್ಟಿಯಾಗಿದ್ದರಂತೆ.
ಅವರ ಬಳಿ ಶಿವಾಜಿ ಗಣೇಶನ್ ಸಿನಿಮಾಗೆ ಸಂಬಂಧಿಸಿದ ಸುಮಾರು 100ಕ್ಕೂ ಅಧಿಕ ಕಾಸ್ಟ್ಯೂಮ್ ಗಳಿದ್ದು ಇವುಗಳ ಸಂಗ್ರಹಣೆಗೆಂದೇ ಅವರು 5 ಬೆಡ್ ರೂಂನ ಪ್ರತ್ಯೇಕ ಫ್ಲ್ಯಾಟ್ ಅನ್ನು ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಶಿವಾಜಿ ಗಣೇಶನ್ ನಟನೆಯ ಸುಮಾರು 80 ಹಾಡುಗಳನ್ನು ಯಾವುದೇ ರೀತಿಯ ಚೀಟಿ ಇಲ್ಲದೇ ಕೇವಲ ತಮ್ಮ ಸ್ಮರಣಶಕ್ತಿಯಿಂದಲೇ ಅಶೋಕನ್ ಹಾಡುತ್ತಿದ್ದರಂತೆ. ಇದೇ ಕಾರಣಕ್ಕೆ ಅವರು ಮಲೇಷ್ಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು ಎನ್ನಲಾಗಿದೆ.
ಇನ್ನು ಅವರ ಆಕಸ್ಮಿಕ ನಿಧನಕ್ಕೆ ಕಲಾವಿದರು ಹಾಗೂ ಅವರ ಅಭಿಮಾನಿಗಳು ಆಘಾತಗೊಂಡಿದ್ದಾರೆ.
Advertisement