
ಕಾಂತಾರಾ ಚಿತ್ರದಲ್ಲಿನ ಲೀಲಾ ಪಾತ್ರದ ಮೂಲಕ ಹೆಸರು ಗಳಿಸಿರುವ ನಟಿ ಸಪ್ತಮಿ ಗೌಡ ಅವರು, ನಟ ಡಾಲಿ ಧನಂಜಯ್ ಅಭಿನಯದ ಹಲಗಲಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಾಲ್ಕು ವರ್ಷದ ಬಳಿಕ ಈ ಜೋಡಿ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದೆ.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಸಪ್ತಮಿ ಗೌಡ ಮೊದಲ ಚಿತ್ರವಾಗಿತ್ತು. ದುನಿಯಾ ಸೂರಿ ಡೈರೆಕ್ಷನ್ ಮಾಡಿದ್ದ ಈ ಚಿತ್ರಕ್ಕೆ ಡಾಲಿ ಧನಂಜಯ್ ಹೀರೋ ಆಗಿದ್ದರು. ಸಪ್ತಮಿ ಗೌಡ ಈ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದರು. ಚಿತ್ರದಲ್ಲಿ ಡಾಲಿ ಧನಂಜಯ್ ಎದುರು ಭರ್ಜರಿಯಾಗಿಯೇ ಅಭಿನಯಿಸಿದರು. ಈ ಸಿನಿಮಾ ಅದಮೇಲೆ ಮತ್ತೆ ಬೇರೆ ಯಾವುದೇ ಸಿನಿಮಾವನ್ನ ಈ ಜೋಡಿ ಮಾಡಿರಲಿಲ್ಲ. ಇದೀಗ ಮತ್ತೊಮ್ಮೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.
ಸಪ್ತಮಿ ಗೌಡ ಅವರು ದಿ ವ್ಯಾಕ್ಸಿನ್ ಮೂಲಕ ಬಾಲಿವುಡ್ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದು, ಇತ್ತೀಚೆಗೆ ಯುವರಾಜಕುಮಾರ್ ಅವರ ಚೊಚ್ಚಲ ಚಿತ್ರ ಯುವ ಸಿನಿಮಾದಲ್ಲೂ ನಟಿಸಿದ್ದರು. ಪ್ರಸ್ತುತ ಸಪ್ತಮಿ ಅವರು ನಿತಿನ್ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದು, ಈ ಮೂಲಕ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ. ನವೆಂಬರ್ 11ರಿಂದ ಹಲಗಲಿ ಚಿತ್ರತಂಡದ ಜೊತೆಗೂಡಲಿದ್ದಾರೆ.
ಹಲಗಲಿ ಚಿತ್ರ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾಡಿದ ಬಾಗಲಕೋಟೆ ಜಿಲ್ಲೆಯ ಹಲಗಲಿ ಗ್ರಾಮದ ಜನರ ಕುರಿತಾದ ಸಿನಿಮಾ ಆಗಿದೆ. 1857 ಸ್ವಾತಂತ್ಯ್ರ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರವು ಸಾರ್ವಜನಿಕರು ಶಸ್ತ್ರಗಳನ್ನು ಬಳಸದಂತೆ ನಿಯಮ ಜಾರಿಗೊಳಿಸಿ, ಎಲ್ಲರ ಬಳೀ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ, ಹಲಗಲಿ ಗ್ರಾಮದ ಜನರು ಬ್ರಿಟಿಷರ ಈ ನೀತಿಯನ್ನು ವಿರೋಧಿಸಿದ್ದರು.
ಆಗ ಹಲಗಲಿ ಗ್ರಾಮದ ಜನತೆ ಹಾಗೂ ಬ್ರಿಟಿಷರ ನಡುವೆ ಯುದ್ಧ ನಡೆಯಿತು. ಇದರಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್ ವಿಲಿಯಮ್ ಹೆನ್ರಿ ಸಾವನ್ನಪ್ಪುತ್ತಾನೆ. ಇದರಿಂದ ಕೋಪಗೊಂಡ ಬ್ರಿಟಿಷ್ ಸರ್ಕಾರ ರಾತ್ರೋರಾತ್ರಿ ಗುಂಡಿನ ದಾಳಿ ನಡೆಸಿ , ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡರು. ಇದೇ ಕಥೆ ಈಗ ತೆರೆ ಮೇಲೆ ಸಿನಿಮಾವಾಗಿ ಬರಲು ಸಜ್ಜಾಗುತ್ತಿದೆ.
ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಚಿತ್ರವನ್ನ ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರಕ್ಕೆ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ದುಡ್ಡು ಹಾಕುತ್ತಿದ್ದು, ಸುಕೇಶ್ ಡಿಕೆ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಂ ಮೊರ್ ಅವರೇ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು 90 ವರ್ಷದ ಗ್ರಾಮದ ಮುಖಂಡ ಹುಲಿಯಪ್ಪ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Advertisement