
ಬಿಚ್ಚುಗತ್ತಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ರಾಜವರ್ಧನ್ ಇತ್ತೀಚೆಗಷ್ಟೇ ತಮ್ಮ ಮೂರನೇ ಸಿನಿಮಾ ಗಜರಾಮ ರಿಲೀಸ್ ಗೆ ಸಜ್ಜಾಗುತ್ತಿದ್ದಾರೆ.
ಟೈಟಲ್ ಝಲಕ್ ಮೂಲಕ ಕುತೂಹಲ ಹೆಚ್ಚಿಸಿರುವ 'ಗಜರಾಮ' ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಮೇಕಿಂಗ್ ಹಂತದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಾರಾಯಿ ಶಾಂತಮ್ಮ ಹಾಡು ಈಗ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಾರಾಯಿ ಶಾಂತಮ್ಮ ಸಾಂಗ್ ರಿಲೀಸ್ ಆಗಿದೆ. ಸುನೀಲ್ ಕುಮಾರ್ ವಿ ನಿರ್ದೇಶನದ ಸಿನಿಮಾ ಡಿಸೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಹಾಡು ಬಿಡುಗಡೆ ಬಳಿಕ ನಟ ರಾಜವರ್ಧನ್ ಮಾತನಾಡಿ, ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೆವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಗಜರಾಮ ಸಿನಿಮಾ ಒಂದು ಕಡೆಯಾದರೆ, ಈ ಸಾಂಗ್ ಒಂದು ಕಡೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ. ಸಾಮಾನ್ಯವಾಗಿ ಈ ರೀತಿಯ ಹಾಡನ್ನು ಮಾಡಲು ಕಷ್ಟ ಆಗುತ್ತದೆ. ಚಿನ್ಮಯ್ ಸರ್ ಒಳ್ಳೆ ಲಿರಿಕ್ಸ್ ಬರೆದುಕೊಟ್ಟರು. ಧನು ಮಾಸ್ಟರ್ ಅದ್ಭುತ ಕೊರಿಯೋಗ್ರಫಿ ಮಾಡಿದ್ದಾರೆ. ಮನೋಮೂರ್ತಿ ಅವರ ಸಂಗೀತದಲ್ಲಿ ಮಂಗ್ಲಿ ಮತ್ತು ಕುನಲ್ ಗಾಂಜಾವಾಲಾ ಹಿನ್ನೆಲೆ ಗಾಯನವಿದೆ. ನಟಿ ರಾಗಿಣಿ ದ್ವಿವೇದಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಸಂತಸ ಇದೆ. ಹಾಡಿನಲ್ಲಿ ರಾಜ್ ವರ್ಧನ್ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಮನೋಮೂರ್ತಿ ಸರ್ ಇಷ್ಟು ಒಳ್ಳೆಯ ಮ್ಯೂಸಿಕ್ ಕೊಡುತ್ತಾರೆ ಎಂದುಕೊಂಡಿರಲಿಲ್ಲ. ಈ ಹಾಡು ಕೇಳಿ ಎಲ್ಲರಿಗೂ ಒಂದೊಳ್ಳೆ ಪಾಸಿಟಿವ್ ವೈಬ್ಸ್ ಬಂದಿದೆ ಎಂದುಕೊಳ್ಳುತ್ತೇನೆ. ಸಿನಿಮಾ ಮಾಡೋದು ತುಂಬಾ ಕಷ್ಟ. ಬಹಳ ತಾಳ್ಮೆಯಿಂದ, ಸಿನಿಮಾ ಮಾಡುವುದು ಒಂದು ಚಾಲೆಂಜ್ ಎಂದರು.
ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಅವರಿಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್ ನಟಿಸಿದ್ದಾರೆ. ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಈ ಮಾಸ್ ಎಂಟರ್‌ಟೈನರ್‌ಗೆ ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಮತ್ತು ಜ್ಞಾನೇಶ್ ಬಿ ಮಠದ್ ಸಂಕಲನವಿದೆ. ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನರಸಿಂಹ ಮೂರ್ತಿ ಅವರು ಮಲ್ಲಿಕಾರ್ಜುನ ಕಾಶಿ ಮತ್ತು ಕ್ಸೇವಿಯರ್ ಫರ್ನಾಂಡಿಸ್ ಅವರೊಂದಿಗೆ ಗಜರಾಮವನ್ನು ನಿರ್ಮಿಸುತ್ತಿದ್ದಾರೆ.
Advertisement