
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರದ ಶೂಟಿಂಗ್ ವೇಳೆ 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ಸಾವನ್ನಪ್ಪಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ವಿ.ಆರ್.ಎಲ್ ಗೋಡೌನ್ನಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯದ ವಹಿಸಿದ ಹಿನ್ನೆಲೆಯಲ್ಲಿ ಮನದ ಕಡಲು ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಮಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ದೂರು ದಾಖಲಾಗಿದೆ.
ವಿ.ಆರ್.ಎಲ್ ಗೋಡೌನ್ನಲ್ಲಿ ಕಳೆದ 15 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಮಂಗಳವಾರ ಸಂಜೆ 5.10ರ ಸುಮಾರಿಗೆ 30 ಅಡಿ ಎತ್ತರದ ಅಲ್ಯುಮಿನಿಯಂ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದಾಗ ಆಯಾತಪ್ಪಿ ಲೈಟ್ ಮ್ಯಾನ್ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement