
ಮೂರು ವರ್ಷಗಳ ವಿರಾಮದ ಬಳಿಕ ಮಾರ್ಟಿನ್ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸಜ್ಜಾಗಿದ್ದಾರೆ.
ಅಕ್ಟೋಬರ್ 11 ರಂದು ವಿಶ್ವದಾದ್ಯಂತ ಮಾರ್ಟಿನ್ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರವು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಅರೇಬಿಕ್, ರಷ್ಯನ್, ಕೊರಿಯನ್, ಚೈನೀಸ್ ಮತ್ತು ಇಂಗ್ಲಿಷ್ ಸೇರಿದಂತೆ 13 ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.
ಈ ನಡುವೆ ಚಿತ್ರ ತಂಡ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದೆ. ಚಿತ್ರಕ್ಕೆ ಎಐ (Artificial Intelligence -ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಿಕೊಂಡಿರುವುದಾಗಿ ತಿಳಿಸಿದೆ.
ಕನ್ನಡ ಅವತರಣಿಕೆಗಾಗಿ ಧ್ರುವ ಸರ್ಜಾ ಅವರು ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿದ್ದು, ಇತರೆ ಭಾಷೆಗಳ ಡಬ್ ಮಾಡಲು ಚಿತ್ರತಂಡ ಎಐ ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎಂದು ನಟ ಧ್ರುವ ಸರ್ಜಾ ಅವರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಧ್ರುವ ಸರ್ಜಾ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಕನ್ನಡದಲ್ಲಿ ನಾನು ಡಬ್ಬಿಂಗ್ ಮಾಡಿದ್ದೇನೆ. ಆದರೆ, ಚಿತ್ರತಂಡ ಇತರೆ ಭಾಷೆಗಳಿಗೆ ಡಬ್ ಮಾಡಲು ಎಐ ತಂತ್ರಜ್ಞಾನವನ್ನು ಬಳಸಿಕೆ. ಈಗಾಗಲೇ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಅಭಿಮಾನಿಗಳನ್ನೂ ಕೊಂಡಾಡಿದರು.
ಇನ್ನು ಟ್ರೇಲರ್ ಬಿಡುಗಡೆ ಬಳಿಕ ಚಿತ್ರ ತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಸಂಗೀತ ನಿರ್ದೇಶಕ ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಕಾಣಿಸಿಕೊಂಡಿದ್ದಾರೆ.
ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ
Advertisement