'ಪೆನ್ ಡ್ರೈವ್' ಚಿತ್ರಕ್ಕೆ ಯು/ಎ ಪ್ರಮಾಣಪತ್ರ; ಪೊಲೀಸ್ ಅಧಿಕಾರಿಯಾಗಿ ನಟಿ ಮಾಲಾಶ್ರೀ ಎಂಟ್ರಿ!
ಸೆಬಾಸ್ಟಿಯನ್ ಡೇವಿಡ್ ನಿರ್ದೇಶನದ ಮುಂಬರುವ ಚಿತ್ರ 'ಪೆನ್ ಡ್ರೈವ್' ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. 30 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದ ಭಾಗವಾಗಿರುವ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅನೇಕ ಚಿತ್ರಗಳನ್ನು ನಿರ್ದೇಶಿಸಿರುವ ಸೆಬಾಸ್ಟಿಯನ್, 'ಪೆನ್ ಡ್ರೈವ್'ಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದಲ್ಲಿ ನಟಿ ಮಾಲಾಶ್ರೀ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ ಮತ್ತು ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮತ್ತು ಎನ್ ಹನುಮಂತರಾಜು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ ಮತ್ತು ನಾಗೇಶ್ ಅವರ ಸಂಕಲನವಿದೆ. ನಾಗೇಶ್ ಅವರು ಚಿತ್ರಕಥೆಗೂ ಕೊಡುಗೆ ನೀಡಿದ್ದಾರೆ.