
''ಜಾಂಟಿ ಸನ್ ಆಫ್ ಜಯರಾಜ್'' ಸಿನಿಮಾದ ತಾಯಿ ಸೆಂಟಿಮೆಂಟಿನ 'ಕ್ಷಮಿಸು ತಾಯೇ 'ಎಂಬ ಹಾಡನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ನಿರ್ದೇಶಕ ಪ್ರೇಮ್ ಧ್ವನಿ ನೀಡಿದ್ದಾರೆ.
ಈ ಟ್ರ್ಯಾಕ್ ಅನ್ನು ಗೀತರಚನೆಕಾರ ಯೋಗರಾಜ್ ಭಟ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಬಿಡುಗಡೆ ಮಾಡಿದರು. ಈ ಹಾಡು ಈಗಾಗಲೇ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ವಿಜೇತ್ ಮಂಜಯ್ಯ ಸಂಯೋಜಿಸಿದ ಟ್ಯೂನ್ ಕೇಳಿದಾಗ ಹಿಟ್ ಆಗುತ್ತದೆ ಎಂದು ನನಗೆ ಗೊತ್ತಾಗಿತ್ತು. ಜನರು ತಮ್ಮ ತಾಯಿಯನ್ನು ನೆನಪಿಸಿಕೊಳ್ಳಬೇಕು ಎಂದು ಈ ಹಾಡು ಬರೆದಿರುವುದಾಗಿ ನಿರ್ದೇಶಕ ಆನಂದ್ ರಾಜ್ ತಿಳಿಸಿದರು. ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಇದು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ಹಾಡು. ಬೇರೆ ಕಡೆಗಳಲ್ಲಿ ತಪ್ಪು ಮಾಡಿದರೆ ನಾವು ತಕ್ಷಣ ಕ್ಷಮೆ ಕೇಳುತ್ತೇವೆ. ಆದರೆ ಅಮ್ಮನ ಬಳಿ ಕ್ಷಮಿಸು ಅಂತ ಕೇಳುವುದಿಲ್ಲ. ನಮ್ಮ ಸಿನಿಮಾದ ಮೂಲಕ ಎಲ್ಲ ತಾಯಂದಿರಿಗೂ ಕ್ಷಮೆ ಕೇಳುತ್ತೇವೆ. ಅಂತಿಮವಾಗಿ ಅಮ್ಮನೇ ಸರ್ವಸ್ವ ವಾಗಿದ್ದು, ಕ್ಷಮೆ ಕೇಳುವ ದಾರಿಯಲ್ಲಿ ಈ ಸಾಂಗ್ ಬರುತ್ತದೆ ಎಂದು ನಿರ್ದೇಶಕರು ಈ ಹಾಡಿನ ಬಗ್ಗೆ ಮಾಹಿತಿ ನೀಡಿದರು.
ನಾಯಕನಾಗಿ ನಟಿಸುತ್ತಿರುವ ಬೆಂಗಳೂರಿನ ಭೂಗತ ಪಾತಕಿ ಎಂ.ಪಿ.ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಮಾತನಾಡಿ, ನಾನು ಎರಡು ಶೇಡ್‌ಗಳಲ್ಲಿ ನಟಿಸುತ್ತಿದ್ದೇನೆ. ನನ್ನ ತಂದೆ ಜಯರಾಜ್‌ನ ಪಾತ್ರವನ್ನು ತೆರೆಯ ಮೇಲೆ ಮಾಡಲು ನನಗೆ ಖುಷಿಯಾಗಿದೆ. ಚಾಪ್ಟರ್ 2 ಕೂಡಾ ಬರುತ್ತದೆ. ನಿರ್ಮಾಪಕ ಸೂಗುರು ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಜವಧರ್ನ್, ಶರತ್ ಲೋಹಿತಾಶ್ವ, ನಿವಿಷ್ಕಾ ಪಾಟೀಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಅಕೋಟ್ ಅವರ ಛಾಯಾಗ್ರಹಣವಿದೆ.
Advertisement