
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '45' ಟೀಸರ್ ಅನಾವರಣಗೊಂಡಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಈ ಸಮಾರಂಭದಲ್ಲಿ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ಉಮಾ ರಮೇಶ್ ರೆಡ್ಡಿ ಮತ್ತು ರಮೇಶ್ ರೆಡ್ಡಿ ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಪ್ರಸಿದ್ಧ ನಟರನ್ನೊಳಗೊಂಡಿರುವ ಈ ಚಿತ್ರ ಅದ್ದೂರಿಯಾಗಿ ಚಿತ್ರೀಕರಣಗೊಂಡಿದ್ದು, ಆಕ್ಷನ್-ಫ್ಯಾಂಟಸಿ ನಿರೂಪಣೆ, ಉತ್ತಮ ಕಥೆಯೊಂದಿಗೆ ಭರವಸೆ ಮೂಡಿಸಿದೆ. ಆಗಸ್ಟ್ 15, 2025 ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಯಿದೆ.
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನಿರ್ದೇಶಿಸಿದ ಈ ಚಿತ್ರ ಆಕ್ಷನ್, ಎಮೋಷನ್ ಹಾಗೂ ಆಳವಾದ ತಾತ್ವಿಕ ಟ್ವಿಸ್ಟ್ ಗಳ ಹೊರಣವಾಗಿದೆ. ಟೀಸರ್ ಬಿಡುಗಡೆ ಸಮಾರಂಭ ಜನರಿಂದ ತುಂಬಿತ್ತು. ಮಾಧ್ಯಮಗಳು ಮತ್ತು ಅಭಿಮಾನಿಗಳು ಟೀಸರ್‌ನ ಭವ್ಯತೆ, ದೃಶ್ಯ ವೈಭವವನ್ನು ಶ್ಲಾಘಿಸಿವೆ. ವಿಷುಯಲ್ ಎಫೆಕ್ಟ್ ಹಾಗೂ ಅತ್ಯುತ್ತಮ ಅಭಿನಯಕ್ಕೆ ಚಪ್ಪಾಳೆಯ ಸುರಿಮಳೆಯಾಯಿತು.
ಈ ವೇಳೆ ಮಾತನಾಡಿದ ಅರ್ಜುನ್ ಜನ್ಯಾ, 45' ಕೇವಲ ಸಿನಿಮಾವಲ್ಲ. ಇದು ಒಂದು ಭಾವನೆ, ಕನಸು ನನಸಾಗಿದೆ. ಇದು ನಮ್ಮ ಉದ್ಯಮದ ಐಕಾನ್‌ಗಳನ್ನು ಜೊತೆಯಾಗಿ ಮಾಡಿದೆ. ಪ್ರತಿಯೊಬ್ಬ ಭಾರತೀಯರನ್ನು ನೋಡುವಂತೆ ಚಿತ್ರ ಮಾಡಲಾಗಿದೆ ಎಂದು ತಿಳಿಸಿದರು.
ಡಾ. ಶಿವರಾಜಕುಮಾರ್ ಮಾತನಾಡಿ, ಕಥೆ ಕೇಳಿದಾಗ ತಕ್ಷಣ ನಾನು ಅದರ ಭಾಗವಾಗಬೇಕೆಂದು ಅನಿಸಿತು. '45' ಅಪರೂಪದ ಶಕ್ತಿ ಮತ್ತು ಸಿನಿಮೀಯ ದೃಷ್ಟಿಯನ್ನು ಹೊಂದಿದೆ, ಅದು ದೇಶದಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ. ಇದು ಶಾಶ್ವತವಾದ ಪ್ರಭಾವ ಬೀರುವ ಶಕ್ತಿಯುತ ಕಥೆಯಾಗಿದೆ ಎಂದರು.
ಉಪೇಂದ್ರ ಮಾತನಾಡಿ, ಈ ಚಿತ್ರವು ಎಲ್ಲ ಅರ್ಥದಲ್ಲಿಯೂ ಜೀವನಕ್ಕಿಂತ ದೊಡ್ಡದಾಗಿದೆ. ಅತ್ಯಾಧುನಿಕ ದೃಶ್ಯ ವೈಭವ ಮತ್ತು ಹಿಡಿತದ ನಿರೂಪಣೆಯೊಂದಿಗೆ ಫ್ಯಾಂಟಸಿ, ಆಕ್ಷನ್ ಮತ್ತು ಭಾವನೆಗಳನ್ನು ಹೊಂದಿರುವ ಸಿನಿಮಾ ಆಗಿದೆ. ಅಂತಹ ವಿಶಿಷ್ಟವಾದ ಸಿನಿಮಾದ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ ಎಂದರು.
ಸೂರಜ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಪ್ರತಿಕ್ರಿಯಿಸಿ, 45' ಚಿತ್ರದ ಮೂಲಕ ಒಂದು ದೃಶ್ಯ ಚಮತ್ಕಾರವನ್ನು ಮತ್ತು ಅವಿಸ್ಮರಣೀಯ ಕಥೆಯನ್ನು ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ಅರ್ಜುನ್ ಜನ್ಯ ಕಥೆ ಬರೆದು ನಿರ್ದೇಶಿಸಿದ್ದಾರೆ ಮತ್ತು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಾ. ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಈ ಚಿತ್ರವು ಈ ಸ್ವಾತಂತ್ರ್ಯ ದಿನದಂದು - ಆಗಸ್ಟ್ 15, 2025 ದೇಶಾದ್ಯಂತ ಬಿಡುಗಡೆಯಾಗಲಿದೆ.
Advertisement