
ಎರ್ನಾಕುಲಂ: ಪ್ರಸಿದ್ಧ ಮಲಯಾಳಂ ಹಾಸ್ಯನಟ ಕಲಾಭವನ್ ನವಾಸ್ (51) ಅವರು ಶುಕ್ರವಾರ ಚೊಟ್ಟನಿಕ್ಕರದಲ್ಲಿರುವ ಹೋಟೆಲ್ ಒಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನಟ ನವಾಸ್ ಅವರು ತಮ್ಮ ಮುಂದಿನ 'ಪ್ರಕಂಬನಂʼ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಶುಕ್ರವಾರ ಚಿತ್ರೀಕರಣ ಮುಗಿಸಿ ಹೋಟೆಲ್ ನಿಂದ ಚೆಕ್‌ಔಟ್ ಮಾಡಬೇಕಿತ್ತು.
ಆದರೆ, ಸಮಯಕ್ಕೆ ತಮ್ಮ ಕೋಣೆಯಿಂದ ನಿರ್ಗಮಿಸದ ಕಾರಣ, ರೂಮ್ ಬಾಯ್ ಅವರು ಹೋಗಿ ನೋಡಿದಾಗ ನವಾಸ್ ಅವರು ಪ್ರಜ್ಞೆತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ವೈದ್ಯರು ನವಾಸ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ನವಾಸ್ ಅವರ ಕೋಣೆಯಲ್ಲಿ ಅನುಮಾನಾಸ್ಪದವಾದ ಯಾವುದೇ ವಸ್ತು ಪತ್ತೆಯಾಗಿಲ್ಲ. ಅವರ ಮೃತದೇಹವನ್ನು ಚೊಟ್ಟನಿಕ್ಕರದ ಎಸ್‌ಡಿ ಟಾಟಾ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆ ಬಳಿಕ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನವಾಸ್ ಅವರು 1995ರಲ್ಲಿ ಚೈತನ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮಟ್ಟುಪೆಟ್ಟಿ ಮಚ್ಚನ್, ಜೂನಿಯರ್ ಮಂದ್ರೇಕ್, ಅಮ್ಮ ಅಮ್ಮಾಯಿ ಅಮ್ಮ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ಗಮನಸೆಳೆದಿದ್ದರು.
ಮಿಮಿಕ್ರಿ ಕ್ಷೇತ್ರದಲ್ಲಿ ‘ಕಲಾಭವನ’ ತಂಡದ ಸದಸ್ಯರಾಗಿದ್ದರು. ದೂರದರ್ಶನ ಮತ್ತು ವಿವಿಧ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಅವರು ಸಕ್ರೀಯವಾಗಿ ಭಾಗವಹಿಸುತ್ತಿದ್ದರು.
ನವಾಸ್ ಅವರು ಪ್ರಸಿದ್ಧ ರಂಗಭೂಮಿ ಕಲಾವಿದ ದಿವಂಗತ ಅಬೂಬಕರ್ ಅವರ ಪುತ್ರ. ಅವರ ಪತ್ನಿ ರೆಹಾನಾ ಹಾಗೂ ಸಹೋದರ ಕಲಾಭವನ್ ನಿಯಾಸ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕಲಾಭವನ್ ನವಾಸ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Advertisement