
ಚಾಮರಾಜನಗರ: ಡಾ ರಾಜ್‌ಕುಮಾರ್ (Dr Rajkumar) ಅವರ ಸಹೋದರಿ ನಾಗಮ್ಮ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.
ದಿವಂಗತ ನಟ ಡಾ.ರಾಜ್ ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಅವರ ಸಹೋದರಿ ನಾಗಮ್ಮ( 94 ವರ್ಷ) ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ದೊಡ್ಡ ಗಾಜನೂರಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ, ಗಾಜನೂರಿನಲ್ಲಿ ತೋಟದ ಮನೆಯಲ್ಲಿ ವಾಸವಾಗಿದ್ದರು. ಇಂದು ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಾಗಮ್ಮ ಅವರು ಐವರು ಪುತ್ರರು, ಮೂವರು ಪುತ್ರಿಯರನ್ನು ಹೊಂದಿದ್ದರು ಎನ್ನಲಾಗಿದೆ.
ಗಾಜನೂರಿನಲ್ಲಿ ಅಂತ್ಯಕ್ರಿಯೆ
ನಾಗಮ್ಮ ನಿಧನದ ಸುದ್ದಿ ತಿಳಿದ ಕೂಡಲೇ ನಟ ಶಿವರಾಜ್ ಕುಮಾರ್ ಗಾಜನೂರಿನತ್ತ ದೌಡಾಯಿಸಿದ್ದಾರೆ. ಚಿತ್ರದ ಕೆಲಸದ ಪ್ರಯುಕ್ತ ಇಂದು ಬೆಳಗ್ಗೆಯಷ್ಟೇ ಗೋವಾಗೆ ತೆರಳಿದ್ದ ಶಿವಣ್ಣ ಮರಳಿ ಬರುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ದೊಡ್ಮನೆಯ ಕುಟುಂಬದವರು ಗಾಜನೂರಿಗೆ ತೆರಳಲಿದ್ದು, ನಾಗಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ನಾಗಮ್ಮನವರ ಅಂತ್ಯಕ್ರಿಯೆ ನಾಳೆ (ಆಗಸ್ಟ್ 2) ಗಾಜನೂರಿನಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೊನೆಗೂ ಅಪ್ಪು ಸಾವಿನ ವಿಚಾರ ತಿಳಿಯಲೇ ಇಲ್ಲ..
ಅಂದಹಾಗೆ ನಾಗಮ್ಮತ್ತೆ ಎಂದೇ ಕರೆಯಲಾಗುತ್ತಿದ್ದ ನಾಗಮ್ಮ ಅವರಿಗೆ ನಟ ಪುನೀತ್ ರಾಜ್‌ಕುಮಾರ್ ಅವರ ಮೇಲೆ ತುಂಬಾ ಪ್ರೀತಿ ಇತ್ತು. ಪುನೀತ್ ರಾಜ್ ಕುಮಾರ್ ಅಗಲಿರುವ ವಿಚಾರ ಮೂರುವರೆ ವರ್ಷಗಳಾದರೂ ಅವರಿಗೆ ತಿಳಿದಿರಲಿಲ್ಲ. ಈ ಹಿಂದೆ ಪುನೀತ್ ಜನ್ಮದಿನದಂದು ಪುನೀತ್ ಗೆ ಜನ್ಮ ದಿನದ ಶುಭಕೋರಿ ನಾಗಮ್ಮ ಅವರು ಮಾತನಾಡಿದ್ದರು. ಅವರ ಆ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಪುನೀತ್ ಅವರನ್ನು ನೋಡಲು ನಾಗಮ್ಮ ಕಾತುರದಿಂದ ಕಾಯುತ್ತಿದ್ದರು. ನೋಡಬೇಕೆಂಬ ಆಸೆಯನ್ನು ಕೂಡ ಹಲವು ಬಾರಿ ವ್ಯಕ್ತಪಡಿಸಿದ್ದರು. ಅಲ್ಲದೆ ಅಪ್ಪು ನಿರ್ಮಾಣದಡಿ ಸಿದ್ಧವಾದ 'ಗಂಧದಗುಡಿ' ಸಾಕ್ಷ್ಯಚಿತ್ರವನ್ನು ನೋಡುವ ಆಸೆಯನ್ನು ಕೂಡ ವ್ಯಕ್ತಪಡಿಸಿದ್ದರು. ರಾಜ್ 'ಗಂಧದ ಗುಡಿ'ಯಂತೆ ಅಪ್ಪು 'ಗಂಧದಗುಡಿ' ಯಶಸ್ವಿಯಾಗಲಿ ಎಂದು ಹಾರೈಸಿದ್ದರು.
ನಾಲ್ಕು ತಿಂಗಳ ಹಿಂದೆ ಸಹ ಯೂಟ್ಯೂಬ್ ಚಾನೆಲ್ ಒಂದರ ಬಳಿ ಮಾತನಾಡಿದ್ದ ನಾಗಮ್ಮ ಅವರು ‘ಅಪ್ಪು ಕಂದ ಒಮ್ಮೆ ಬಂದು ನನ್ನನ್ನು ನೋಡಿಕೊಂಡು ಹೋಗು’ ಎಂದಿದ್ದರು. ಕಳೆದ ಬಾರಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಹೋಗಿದ್ದಾಗ, ಶಿವರಾಜ್ ಕುಮಾರ್ ಕೈ ಹಿಡಿದುಕೊಂಡು ಭವಿಷ್ಯ ಹೇಳಿದ್ದರು. ಕೆನ್ನೆಗೆ ಮುತ್ತು ಕೊಟ್ಟು ಹರಸಿದ್ದರು.
Advertisement