
ಚಾಮರಾಜನಗರ: ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ವರ್ಷಗಳೇ ಕಳೆದರೂ ಅವರ ಸೋದರತ್ತೆ ನಾಗಮ್ಮ ಅವರಿಗೆ ಮಾತ್ರ ಅಪ್ಪು ಸಾವಿನ ವಿಚಾರ ಇನ್ನೂ ತಿಳಿದಿಲ್ಲ..
ಅಚ್ಚರಿಯಾದರೂ ಇದು ಸತ್ಯ.. ಪುನೀತ್ ರಾಜ್ಕುಮಾರ್ ಇಲ್ಲ ಎಂಬ ಸುದ್ದಿ ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಪುನೀತ್ ಅವರ ಸೋದರತ್ತೆ ನಾಗಮ್ಮನಿಗೆ ಮಾತ್ರ ಈ ವಿಚಾರ ಇನ್ನೂ ತಿಳಿದಿಲ್ಲ. ಪುನೀತ್ ಜನ್ಮದಿನದ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಅವರಿಗೆ ಶುಭ ಹಾರೈಸಿರುವ ನಾಗಮ್ಮ, ಒಮ್ಮೆ ಬಂದು ನೊಡ್ಕೊಂಡು ಹೋಗು ಕಂದಾ ಎಂದು ಕೋರಿದ್ದಾರೆ.
ಕರ್ನಾಟಕದಾದ್ಯಂತ ನಟ ಪುನೀತ್ ರಾಜ್ ಕುಮಾರ್ ಜನ್ಮದಿನದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಣೆ ಮಾಡಿಕೊಳ್ಳುತ್ತಿದ್ದರೆ ಅತ್ತ ಅವರ ಸೋದರತ್ತೆ ನಾಗಮ್ಮ ಅವರು ಮಾತ್ರ ಪುನೀತ್ ಒಮ್ಮೆ ನನ್ನನ್ನು ಬಂದು ನೋಡಿಕೊಂಡು ಹೋಗು ಎಂದು ಮನವಿ ಮಾಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಗೆ ಜನ್ಮ ದಿನದ ನಿಮಿತ್ತ ಶುಭ ಕೋರಿರುವ ನಾಗಮ್ಮ ಅವರು, ‘ಚೆನ್ನಾಗಿದಿಯಾ ಮಗನೇ? ನಿನಗೆ 50 ವರ್ಷ ಆಗಿದೆ. ನಿನಗೆ 50 ವರ್ಷ ಆಯ್ತಲ್ಲೋ’ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ಹೇಳಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಈ ವೇಳೆ ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ ಎಂದೂ ನಾಗಮ್ಮ ಕೇಳಿಕೊಂಡಿದ್ದಾರೆ.
ನಾಗಮ್ಮ ಅವರ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಅಪ್ಪು ನಿಧನರಾಗಿರುವ ವಿಚಾರ ತಿಳಿದರೆ ಶಾಕ್ ಆಗುತ್ತದೆ ಎಂಬ ಕಾರಣಕ್ಕೆ ನಾಗಮ್ಮ ಅವರಿಂದ ಈ ವಿಚಾರವನ್ನು ಮುಚ್ಚಿಡಲಾಗಿದೆ. ನಾಗಮ್ಮ ಅವರು ಅಪ್ಪು ಬಗ್ಗೆ ವಿಚಾರಿಸಿದಾಗಲೆಲ್ಲಾ ಅಪ್ಪು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ ಎಂದು ಸಬೂಬು ಹೇಳಿದ್ದಾರೆ ಎನ್ನಲಾಗಿದೆ.
Advertisement