
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕಳೆದ ವರ್ಷ ಸೂಪರ್ ಹಿಟ್ ಆಗಿತ್ತು. ಬಹಳ ದಿನಗಳ ಬಳಿಕ ಗಣಿಗೆ ಒಂದೊಳ್ಳೆ ಬ್ರೇಕ್ ಸಿಕ್ಕಿತ್ತು. ಇದೀಗ 'ಕೃಷ್ಣಂ ಪ್ರಣಯ ಸಖಿ' ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ.
ಇನ್ನೂ ಹೆಸರಿಡದ ಈ ಸಿನಿಮಾದ ಮುಹೂರ್ತ ಸಮಾರಂಭ ಆಗಸ್ಟ್ 3 ರಂದು ನಡೆದಿದ್ದು, ಮೈಸೂರು ಹಾಗೂ ಸುತ್ತಮುತ್ತಲಿನಲ್ಲಿ ಚಿತ್ರ ಚಿತ್ರೀಕರಣ ನಡೆಯುತ್ತಿದೆ.
ಸಮೃದ್ಧಿ ಮಂಜುನಾಥ್ ನಿರ್ಮಿಸಿದ ಮತ್ತು ವಿರಾಟ್ ಸಾಯಿ ಕ್ರಿಯೇಷನ್ಸ್ ಪ್ರಸ್ತುತಪಡಿಸಿದ ಕೆವಿಸಿ ಪ್ರೊಡಕ್ಷನ್ಸ್ ಬೆಂಬಲಿತಜ ಈ ಚಿತ್ರದಲ್ಲಿ ಗಣೇಶ್ ಅವರು, ಈ ಹಿಂದೆ ಎಂದೂ ನಟಿಸದ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು ರೊಮ್ಯಾಂಟಿಕ್ ಫ್ಯಾಮಿಲಿ ಕಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ದೇವಿಕಾ ಭಟ್ ಅವರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 2ನೇ ನಾಯಕಿಗಾಗಿ ಚಿತ್ರತಂಡ ಹುಡುಕಾಟ ಮುಂದವರೆಸಿದೆ. ಇನ್ನು ಪಾತ್ರವರ್ಗಗಳ ಬಗ್ಗೆ ಚಿತ್ರತಂಡ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಇನ್ನು ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕರಾಗಿ ವೆಂಕಟ್ ಪ್ರಸಾದ್ , ಹಾಯ್ ನಾನ ಮತ್ತು ಹೃದಯಂ ಚಿತ್ರ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಲಿದ್ದಾರೆ. ವಿಜಯ್ ಈಶ್ವರ್ ಮತ್ತು ಕ್ರಾಂತಿ ಕುಮಾರ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.
ನಿರ್ಮಾಪಕರು 120 ದಿನಗಳ ಚಿತ್ರೀಕರಣ ವೇಳಾಪಟ್ಟಿಯನ್ನು ಯೋಜಿಸಿದ್ದಾರೆ, ಮೊದಲ 50 ದಿನಗಳ ಚಿತ್ರೀಕರಣ ಈಗಾಗಲೇ ಮೈಸೂರು ಮತ್ತು ಸುತ್ತಮುತ್ತ ನಡೆಯುತ್ತಿದೆ. ಇದಲ್ಲದೆ, ಚಿತ್ರ ತಂಡವು ಕೇರಳ, ಉತ್ತರ ಭಾರತ, ಭೂತಾನ್ ಮತ್ತು ಪ್ಯಾರಿಸ್‌ನ ಸುಂದರವಾದ ಸ್ಥಳಗಳನ್ನೂ ಕೂಡ ಅನ್ವೇಷಿಸುತ್ತಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಗಣೇಶ್ ಅವರು ವಿಖ್ಯಾತ್ ನಿರ್ದೇಶನದ ಯುವರ್ಸ್ ಸಿನ್ಸೆರ್ಲಿ ರಾಮ್, ಧನಂಜಯ್ ಜೊತೆ ಪಿನಾಕಾ ಮತ್ತು ಗೀತರಚನೆಕಾರ-ನಿರ್ದೇಶಕ ಅರಸು ಅಂತಾರೆ ಅವರ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
Advertisement