
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೀಗಾಗಿ ಸದ್ಯ ಪವಿತ್ರಾಗೌಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ದರ್ಶನ್ ಬಂಧನಕ್ಕಾಗಿ ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಜೈಲು ಸೇರುತ್ತಿರುವುದರಿಂದ ಇದು ಚಿತ್ರರಂಗದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಲಿವೆ. ಅದಾಗಲೇ ದರ್ಶನ್ ನಾಲ್ಕಾರು ಸಿನಿಮಾಗಳಿಗೆ ಸಹಿ ಹಾಕಿದ್ದರು. ಇನ್ನು ಡೆವಿಲ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಅದರ ಮೇಲೆ ನೆಗೆಟಿವ್ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಮಧ್ಯೆ ಸಣ್ಣ ಬಜೆಟ್ ಚಿತ್ರವಾದ ಸು ಫ್ರಮ್ ಸೋ ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಚಿತ್ರ ಬಿಡುಗಡೆಯಾಗಿ 20ನೇ ದಿನವೂ ಕೋಟಿಗಳಲ್ಲಿ ಗಳಿಕೆ ಮಾಡಿದೆ. ಈ ಮೂಲಕ 2025ರಲ್ಲಿ ಕನ್ನಡದಲ್ಲಿ ದಾಖಲೆ ಮಾಡಿದ ಚಿತ್ರವಾಗಿ ಹೊರ ಹೊಮ್ಮಿದೆ. sacnilk.com ಪ್ರಕಾರ ಸು ಫ್ರಮ್ ಸೋ ಭಾರತದಲ್ಲಿ ಒಟ್ಟಾರೆ 69.25 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಒಟ್ಟಾರೆ 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸು ಫ್ರಮ್ ಸೋ ಚಿತ್ರ ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.
sacnilk.com ಪ್ರಕಾರ ಕಾಟೇರ ಚಿತ್ರ ಭಾರತದಲ್ಲಿ 68.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಜಗತ್ತಿನಾದ್ಯಂತ 80.5 ಕೋಟಿ ಕಲೆಕ್ಷನ್ ಮಾಡಿತ್ತು. ಕಾಟೇರ ಚಿತ್ರದ 45 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದರೆ ಸು ಫ್ರಮ್ ಸೋ 4 ರಿಂದ 6 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ.
Advertisement