
ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ನಟನೆಯ ಕೂಲಿ ಚಿತ್ರವು ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ₹222.5 ಕೋಟಿ ಗಳಿಸುವ ಮೂಲಕ ಮೊದಲ ವಾರವನ್ನು ಯಶಸ್ವಿಯಾಗಿ ಮುಗಿಸಿದೆ. ಬಿಡುಗಡೆಯಾದ ಆರಂಭಿಕ ವಾರದಲ್ಲಿ ದಾಖಲೆಯ ಗಳಿಕೆ ಕಂಡ ನಂತರ ಚಿತ್ರದ ಕಲೆಕ್ಷನ್ ಕೊಂಚ ಕುಸಿತ ಕಂಡಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಚಿತ್ರವು ಬಿಡುಗಡೆಯಾದ 7ನೇ ದಿನದಂದು ಸುಮಾರು ₹6.5 ಕೋಟಿ ಗಳಿಸಿದೆ. ಮಂಗಳವಾರ ಚಿತ್ರವು 9.5 ಕೋಟಿ ರೂ. ಗಳಿಸಿತ್ತು.
ಕೂಲಿ ಚಿತ್ರ ಬಿಡುಗಡೆಯಾದ ಮೊದಲ ದಿನ ₹65 ಕೋಟಿ, ಎರಡನೇ ದಿನ ₹54.75 ಕೋಟಿ, ಮೂರನೇ ದಿನ ₹39.5 ಕೋಟಿ, ನಾಲ್ಕನೇ ದಿನ ₹35.25 ಕೋಟಿ, ಐದನೇ ದಿನ ₹12 ಕೋಟಿ, ಆರನೇ ದಿನ ₹9.5 ಕೋಟಿ ಮತ್ತು ಅಂತಿಮವಾಗಿ 7ನೇ ದಿನ ₹6.5 ಕೋಟಿ ಗಳಿಕೆ ಕಂಡಿದೆ.
ಈ ಕುಸಿತದ ಹೊರತಾಗಿಯೂ, ಚಿತ್ರದ ಒಟ್ಟಾರೆ ಗಳಿಕೆಯು ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ ₹220 ಕೋಟಿ ಮೈಲಿಗಲ್ಲನ್ನು ಮೀರಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ವಾರ್ 2 ಚಿತ್ರವು ಬಿಡುಗಡೆಯಾಗಿದ್ದು, ಸ್ಪರ್ಧೆ ಏರ್ಪಟ್ಟಿದೆ. ಇದೀಗ ಕೂಲಿ ತನ್ನ ಎರಡನೇ ವಾರದಲ್ಲಿ ಹೇಗೆ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಆ್ಯಕ್ಷನ್ ಚಿತ್ರವು ಲೋಕೇಶ್ ಕನಕರಾಜ್ ಮತ್ತು ರಜನಿಕಾಂತ್ ಅವರ ಮೊದಲ ಸಹಯೋಗವಾಗಿದ್ದು, ಲೋಕೇಶ್ ಅವರ ಆರನೇ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಸೌಬಿನ್ ಶಾಹಿರ್, ಶ್ರುತಿ ಹಾಸನ್ ಮತ್ತು ರಚಿತಾ ರಾಮ್ ಸೇರಿದಂತೆ ಬಹು ತಾರಾಗಣವಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ, ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.
Advertisement