
ಉಡುಪಿ : ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರದ ಮನೆಯಲ್ಲಿ ಅವರು ಕೊನಯುಸಿರೆಳೆದಿದ್ದಾರೆ.
ಕೆಜಿಎಫ್ ಬಾಂಬೆ ಡಾನ್ ಪಾತ್ರದಲ್ಲಿ ನಟಿಸಿದ್ದ ದಿನೇಶ್, ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ, ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದರು.
Brain Stroke ಸ್ಟ್ರೋಕ್‌ನಿಂದಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 3.30ಕ್ಕೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಕಲಾ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದಿದ್ದರು. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಹಲವು ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿದ್ದರು.
ಮೃತರು ಮಕ್ಕಳಾದ ಪವನ್, ಸಜ್ಜನ್ ಹಾಗೂ ಪತ್ನಿ ಭಾರತಿ ಅವರನ್ನು ಅಗಲಿದ್ದಾರೆ. ದಿನೇಶ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ 8 ಘಂಟೆಯಿಂದ ಲಗ್ಗೆರೆಯ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಖ್ಯಾತ ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಬಳಿ '' ಚಿನ್ನಾರಿ ಮುತ್ತ'' ಸೇರಿ ಕೆಲ ಚಿತ್ರಗಳಿಗೆ ಸಹಾಯರಾಗಿ ಆರಂಭದ ಕೆಲ ವರ್ಷ ಕೆಲಸ ಮಾಡಿದ್ದ ದಿನೇಶ್ ಮಂಗಳೂರು ಆ ನಂತರ ಟಿ.ಎಸ್ ನಾಗಾಭರಣ ನಿರ್ದೇಶನದ ''ಜನುಮದ ಜೋಡಿ'' ಚಿತ್ರದ ಮೂಲಕ ಸ್ವತಂತ್ರ್ಯ ಕಲಾ ನಿರ್ದೇಶಕರಾದರು. ಆ ನಂತರ '' ವೀರ ಮದಕರಿ''..''ಚಂದ್ರಮುಖಿ ಪ್ರಾಣಸಖಿ''.. ''ನಂ 73 ಶಾಂತಿನಿವಾಸ'' ಸೇರಿ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ದಿನೇಶ್ ಮಂಗಳೂರು ಅವರಿಗೆ ಶಿವರಾಜ್ ಕುಮಾರ್ ಅಭಿನಯದ ''ರಾಕ್ಷಸ'' ಚಿತ್ರದಲ್ಲಿನ ಆರ್ಟ್ ವರ್ಕ್‌ಗೆ 2004-05ನೇ ಸಾಲಿನ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.
Advertisement