
ಕೊಚ್ಚಿನ್: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಕೇರಳ ಮೂಲದ ಖ್ಯಾತ ನಟಿ ಲಕ್ಷ್ಮಿ ಮೆನನ್ (Lakshmi Menon) ವಿರುದ್ಧ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ನಟಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಐಟಿ ಉದ್ಯೋಗಿಯೊಬ್ಬರ ಕಾರನ್ನು ತಡೆದು ಅವರನ್ನು ಅಪಹರಿಸಿ ಥಳಿಸಿದ ಪ್ರಕರಣದಲ್ಲಿ ನಟಿ ಲಕ್ಷ್ಮೀ ಮೆನನ್ ಆರೋಪಿಯಾಗಿದ್ದರು. ಈ ಸಂಬಂಧ ಅವರು ತಮ್ಮ ವಕೀಲರ ಮೂಲಕ ಕೇರಳ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಕ್ಷ್ಮಿ ಮೆನನ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದ ಮೂರನೇ ಆರೋಪಿಯಾಗಿರುವ ಲಕ್ಷ್ಮಿ ಮೆನನ್ ಸದ್ಯ ತಲೆಮರೆಸಿಕೊಂಡಿದ್ದು, ನಟಿಯ ಜೊತೆಗಿದ್ದ ಮಿಥುನ್, ಅನೀಶ್ ಹಾಗೂ ಓರ್ವ ಮಹಿಳಾ ಸ್ನೇಹಿತೆಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಲುವಾ ಮೂಲದ ಐಟಿ ಕಂಪನಿ ಉದ್ಯೋಗಿಯೊಬ್ಬರು ತನ್ನನ್ನು ಅಪಹರಿಸಿ, ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಓಣಂವರೆಗೂ ನಟಿಗೆ ರಿಲೀಫ್
ಇನ್ನು ಈ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ನಟಿ ಲಕ್ಷ್ಮೀ ಮೆನನ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಅವರ ಬಂಧನಕ್ಕೆ ತಡೆ ನೀಡಿದ್ದು, ಓಣಂ ನಂತರ ವಿಚಾರಣೆಗೆ ಅರ್ಜಿಯನ್ನು ಮುಂದೂಡಿದೆ. ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಸದ್ಯಕ್ಕೆ ಲಕ್ಷ್ಮೀ ಮೆನನ್ ಅವರಿಗೆ ನ್ಯಾಯಾಲಯ ನಿರ್ದೇಶನದಿಂದ ಬಿಗ್ ರಿಲೀಫ್ ಸಿಕ್ಕಿದೆ.
ಲಕ್ಷ್ಮೀ ಮೆನನ್ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ದೂರುದಾರರು ಬಾರ್‌ನಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಾರ್‌ನಿಂದ ಹೊರಬಂದ ನಂತರ ದೂರುದಾರರು ಕಾರಿನಲ್ಲಿ ತಮ್ಮನ್ನು ಹಿಂಬಾಲಿಸಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಐಟಿ ಉದ್ಯೋಗಿ ಸಲ್ಲಿಸಿರುವ ದೂರಿನ ವಿಷಯವು ಕಟ್ಟುಕಥೆಯಾಗಿದೆ. ಅಪರಾಧಕ್ಕೂ ತನಗೆ ಯಾವುದೇ ಸಂಬಂಧವಿಲ್ಲ ಮತ್ತು ಯಾವುದೇ ಅಪರಾಧ ಮಾಡಿಲ್ಲ ಎಂದು ಅರ್ಜಿಯಲ್ಲಿ ಲಕ್ಷ್ಮೀ ಮೆನನ್ ಹೇಳಿದ್ದಾರೆ.
ಇಷ್ಟಕ್ಕೂ ಏನಿದು ಘಟನೆ?
ದೂರುದಾರರಾದ ಅಲಿಯಾರ್ ಶಾ ಸಲೀಂ ಪ್ರಕಾರ, ಕೆಲವು ದಿನಗಳ ಹಿಂದೆ ಬಾರ್‌ನಲ್ಲಿ ಯಾವುದೋ ಒಂದು ವಿಚಾರಕ್ಕೆ ಲಕ್ಷ್ಮೀ ಮೆನನ್ ಅವರ ಗ್ಯಾಂಗ್, ಅಲಿಯಾರ್ ಮತ್ತು ಅವರ ಸ್ನೇಹಿತನೊಂದಿಗೆ ತಗಾದೆ ತೆಗೆದು, ಜೋರಾಗಿ ಜಗಳವಾಡಿದೆ.
ಇದಾದ ಬಳಿಕ ಅಲಿಯಾರ್ ಅವರನ್ನು ಹಿಂಬಾಲಿಸಿ ಹೋಗಿ, ಅವರ ಕಾರನ್ನು ಎರ್ನಾಕುಲಂ ನಾರ್ತ್ ಓವರ್‌ಬ್ರಿಡ್ಜ್ ಸಮೀಪದಲ್ಲಿ ನಟಿಯ ಗ್ಯಾಂಗ್ ತಡೆದಿದೆ. ಈ ವೇಳೆ ಆರೋಪಿಗಳಾದ ಲಕ್ಷ್ಮೀ ಮೆನನ್, ಮಿಥುನ್, ಅನೀಶ್ ಮತ್ತು ಸೋನಾಮೋಲ್ ಸೇರಿದಂತೆ ಒಂದು ಗ್ಯಾಂಗ್, ದೂರುದಾರ ಅಲಿಯಾರ್ರನ್ನು ಕಾರಿನಿಂದ ಬಲವಂತವಾಗಿ ಎಳೆದು, ಮತ್ತೊಂದು ವಾಹನದಲ್ಲಿ ಕರೆದೊಯ್ದು, ದೈಹಿಕವಾಗಿ ಹಲ್ಲೆ ಮಾಡಿ, ಗಂಭೀರ ಬೆದರಿಕೆ ಹಾಕಿದ್ದಾರೆ.
ಇದಾದ ನಂತರ, ಅಲಿಯಾರ್ ಅವರನ್ನು ಅಲುವಾ-ಪರವೂರ್ ಜಂಕ್ಷನ್‌ನಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾದರು ಎಂದು ಅಲಿಯಾರ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಸಿಟಿವಿ ವಿಡಿಯೋ ವೈರಲ್, ನಟಿ ಇದ್ದರು ಎಂದ ಪೊಲೀಸ್
ಸಿಸಿಟಿವಿ ದೃಶ್ಯಗಳು ಹೊರಬಂದ ನಂತರ, ನಟಿ ಕೂಡ ಗ್ಯಾಂಗ್‌ನಲ್ಲಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಬಳಿಕ ಈ ಪ್ರಕರಣದಲ್ಲಿ ಲಕ್ಷ್ಮೀ ಮೆನನ್ ಅವರನ್ನು ಮೂರನೇ ಆರೋಪಿಯಾಗಿ ಹೆಸರಿಸಲಾಗಿದೆ. ಬಾರ್‌ನಲ್ಲಿ ನಡೆದ ಜಗಳವೇ ಅಪಹರಣ ಮತ್ತು ಥಳಿತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎರ್ನಾಕುಲಂ ನಾರ್ತ್ ಪೊಲೀಸರು ಈಗಾಗಲೇ ಮೂವರು ಆರೋಪಿಗಳಾದ ಮಿಥುನ್, ಅನೀಶ್ ಮತ್ತು ಸೋನಾಮೋಲ್ ಅವರನ್ನು ಬಂಧಿಸಿದ್ದಾರೆ. ಲಕ್ಷ್ಮೀ ಮೆನನ್ ಪ್ರಸ್ತುತ ಪರಾರಿಯಾಗಿದ್ದಾರೆ. ಈ ಕೃತ್ಯದಲ್ಲಿ ಆಕೆ ಭಾಗಿಯಾಗಿರುವುದನ್ನು ದೃಢೀಕರಿಸುವ ವಿಡಿಯೋ ಸಾಕ್ಷ್ಯಗಳು ಸದ್ಯ ಪೊಲೀಸರಿಗೆ ಸಿಕ್ಕಿವೆ. ವಿಡಿಯೋದಲ್ಲಿ ಲಕ್ಷ್ಮೀ ಮೆನನ್ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
Advertisement