

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಧ್ಯೆ ಅವರ ನಟನೆಯ ‘ಡೆವಿಲ್’ ಸಿನಿಮಾ ನಿನ್ನೆ ತೆರೆಕಂಡು ಥಿಯೇಟರ್ ನಲ್ಲಿ ದೊಡ್ಡ ಪರದೆ ಮೇಲೆ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಮೂಲಕ ಕೊಂಚ ಸಮಾಧಾನವಾಗಿದ್ದಾರೆ.
ಸಿನಿಮಾ ತೆರೆಕಂಡ ಮೊದಲ ದಿನ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಡೆವಿಲ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರಪ್ರೇಮಿಗಳಿಂದಲೂ ಪ್ರಶಂಸೆ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಖುಷಿಯ ಕ್ಷಣವನ್ನು ಅನುಭವಿಸಲು ತಮ್ಮ ನೆಚ್ಚಿನ ನಾಯಕ, ಡಿ ಬಾಸ್ ಅಣ್ಣ ...ಅಣ್ಣ ಎಂದು ಬಾಯ್ತುಂಬ ಕರೆಯುವ ಅಭಿಮಾನಿಗಳಿಗೆ ದರ್ಶನ್ ಹೊರಗೆ ಇಲ್ಲವಲ್ಲಾ ಎಂಬ ಬೇಸರ.
ನಿನ್ನೆ ಥಿಯೇಟರ್ ಗೆ ಬಂದು ತಮ್ಮ ಬಾಸ್ ಚಿತ್ರವನ್ನು ನೋಡಿ ಆಸ್ವಾದಿಸಿ ಹೊರಬಂದು ಮಾಧ್ಯಮಗಳ ಮುಂದೆ ಮಾತನಾಡುವಾಗ ಓರ್ವ ಅಭಿಮಾನಿಯಂತೂ ಅತಿರೇಕವೆನಿಸುವಂತೆ ಮಾತನಾಡಿದ್ದು ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
‘ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ’ ಎಂದು ಅಭಿಮಾನಿ ಹೇಳಿರುವುದಕ್ಕೆ ತರಹೇವಾರಿ ಕಮೆಂಟ್ ಬರುತ್ತಿದೆ. ದರ್ಶನ್ ಅಭಿಮಾನಿಯ ಈ ಮಾತು ಅಭಿಮಾನವೋ ಅಥವಾ ಅಂದಾಭಿಮಾನವೋ ಎಂಬ ಅನುಮಾನ ಮೂಡುತ್ತಿದೆ.
‘ನನ್ನ ಜನ್ಮಕೊಟ್ಟ ತಂದೆ-ತಾಯಿಯನ್ನು ಕಳೆದುಕೊಂಡರೂ ಅಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಇಲ್ಲದೆ ಸಿನಿಮಾ ನೋಡುತ್ತಿರುವುದು ಬೇಸರ ಆಗಿದೆ. ಅಭಿಮಾನ ಎಂದರೆ ಇದೇ. ತಾಯಿ ಋಣ ಆದರೂ ತೀರಿಸಬಹುದೇನೋ. ಇವರ ಅಭಿಮಾನ ತೀರಿಸೋಕೆ ಆಗಲ್ಲ’ ಎಂದು ಅಭಿಮಾನಿ ಹೇಳಿದ್ದಾನೆ.
ಅಷ್ಟೊಂದು ಅಭಿಮಾನ ಏಕೆ, ನಿಮಗೆ ದರ್ಶನ್ ಅವರು ಏನು ಮಾಡಿದ್ದಾರೆ ಎಂದು ಕೇಳಿದಾಗ, ‘25 ವರ್ಷದಿಂದ ಅವರನ್ನು ನೋಡುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡಿ ಬೆಳೆದಿದ್ದೇನೆ. ಎಡಗೈಗೆ ಕೊಟ್ಟಿದನ್ನು ಅವರು ಬಲಗೈ ಹೇಳೋದಿಲ್ಲ. ಹೀಗಿರುವಾಗ ಅವರು ಮಾಡಿದ್ದನ್ನು ನಾವು ಹೇಳಬಾರದು. ಅವರು ಇಲ್ಲ ಎಂಬುದು ಒಂದೇ ನೋವು. ಮತ್ಯಾವ ನೋವು ಇಲ್ಲ’ ಎಂದಿದ್ದಾನೆ.
ನಟರ ಮೇಲೆ ಅಭಿಮಾನ,, ಪ್ರೀತಿ ಇರಬೇಕು, ಆದರೆ ಅದು ಅತಿರೇಕಕ್ಕೆ ಹೋಗಬಾರದು ಎಂದು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
Advertisement