ದರ್ಶನ್ ಕೈಹಿಡಿತ ಡೆವಿಲ್: 6 ದಿನದಲ್ಲಿ ಒಟ್ಟು 25 ಕೋಟಿ ರೂ ಕಲೆಕ್ಷನ್, ಸಿನಿಮಾ ಸೋಲ್ತಾ? ಗೆಲ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ನಟ ದರ್ಶನ್ ಗೆ ಡೆವಿಲ್ ಚಿತ್ರದ ಗೆಲುವು ಹೆಚ್ಚು ಮಹತ್ವದ್ದಾಗಿತ್ತು. ನಿರೀಕ್ಷೆಯಂತೆ ಡೆವಿಲ್ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿ ಮೊದಲ ದಿನ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ನಂತರದ ದಿನಗಳಲ್ಲಿ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಾ ಸಾಗಿದೆ.
Sacnilk ವರದಿ ಪ್ರಕಾರ, ಶುಕ್ರವಾರ 3.4 ಕೋಟಿ, ಶನಿವಾರ 3.80 ಕೋಟಿ ಹಾಗೂ ಭಾನುವಾರ 4 ಕೋಟಿ ರೂಪಾಯಿ ಅಷ್ಟು ಗಳಿಕೆ ಮಾಡಿದ್ದು ಮೊದಲ ವಾರದಲ್ಲಿ ಚಿತ್ರ 25 ಕೋಟಿ ಗಳಿಕೆ ಮಾಡಿದೆ. ಆದರೆ ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಚಿತ್ರ ಸೋತಿದೆ. ಸೋಮವಾರ 1.40 ಕೋಟಿ ರೂಪಾಯಿ ಮಾತ್ರ ಗಳಿಕೆ ಮಾಡಿದೆ.
ಮಂಗಳವಾರ ಈ ಗಳಿಕೆ 40 ರಿಂದ 60 ಲಕ್ಷ ರೂಪಾಯಿಗೆ ಕುಸಿದಿದೆ ಎಂದು ವರದಿಯಾಗಿದೆ. ಇನ್ನು ಬಾಲಕೃಷ್ಣ ನಟನೆಯ ಅಖಂಡ 2 ಮತ್ತು ಹಿಂದಿಯ ಧುರಂಧರ್ ಚಿತ್ರಗಳು ಡೆವಿಲ್ ಕಲೆಕ್ಷನ್ ಮೇಲೆ ತೀವ್ರ ಪರಿಣಾಮ ಬೀರಿದೆ.
ಡಿಸೆಂಬರ್ 25ರಂದು ಸುದೀಪ್ ಅಭಿನಯದ ಮಾರ್ಕ್ ಮತ್ತು ಶಿವರಾಜಕುಮಾರ್ ಮತ್ತು ಉಪೇಂದ್ರ ಅಭಿನಯದ ‘45’ ಚಿತ್ರಗಳು ರಿಲೀಸ್ ಆಗುತ್ತಿವೆ. ಇದರಿಂದಾಗಿ ಡೆವಿಲ್ ಗೆ ಸಿಕ್ಕ ಶೋ ಸಂಖ್ಯೆ ಕಡಿಮೆ ಆಗಬಹುದು. ಇದು ತಂಡದ ಆತಂಕಕ್ಕೆ ಕಾರಣವಾಗಿದೆ. ಸಿನಿಮಾದ ಒಟ್ಟೂ ಗಳಿಕ 25 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. 20 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಡೆವಿಲ್ ಚಿತ್ರ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದು ಕೆಲ ದಿನಗಳಲ್ಲಿ ಅಂತಿಮ ಅಂಕಿಅಂಶಗಳು ಸಿಗಲಿದೆ.


