

ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆ ಆಧಾರಿತ ಚಿತ್ರ 'ಮಾ ವಂದೇ' ಶುಕ್ರವಾರ ಸಾಂಪ್ರದಾಯಿಕ ಪೂಜಾ ಸಮಾರಂಭದೊಂದಿಗೆ ಸೆಟ್ಟೇರಿತು. ತೆಲುಗು ನಿರ್ದೇಶಕ ಕ್ರಾಂತಿ ಕುಮಾರ್ ಸಿಎಚ್ ಬರೆದು, ನಿರ್ದೇಶಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ಮೋದಿ ಪಾತ್ರದಲ್ಲಿ ನಟಿಸಿದ್ದಾರೆ. ಸಿಲ್ವರ್ ಕಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೀರ್ ರೆಡ್ಡಿ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಮೋದಿ ಅವರ ಪಾತ್ರವನ್ನು ನಿರ್ವಹಿಸುವ ಬಗ್ಗೆ ತಮ್ಮ ಉತ್ಸಾಹವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಉನ್ನಿ, 'ಇತ್ತೀಚಿನ ವರ್ಷಗಳಲ್ಲಿ ಅನೇಕ ಬಲವಾದ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಮಾ ವಂದೇ ಚಿತ್ರದಲ್ಲಿ ಶಕ್ತಿ ಮತ್ತು ದೈಹಿಕತೆಯನ್ನು ಮೀರಿ, ಮನುಷ್ಯನ ಭಾವನಾತ್ಮಕ ಮತ್ತು ಮಾನಸಿಕ ಶಕ್ತಿಯನ್ನು ಸತ್ಯವಾಗಿ ಅನ್ವೇಷಿಸುವ ಪ್ರಯತ್ನವಿದೆ' ಎಂದು ಅವರು ಹೇಳಿದರು.
ನಿರ್ಮಾಪಕರ ಪ್ರಕಾರ, ಈ ಚಿತ್ರವು 'ಒಂದು ರಾಷ್ಟ್ರದ ಹಾದಿಯನ್ನು ಬದಲಾಯಿಸಿದ ಪ್ರಯಾಣ'ದ ಬಗ್ಗೆ ಹೇಳುತ್ತದೆ.
ಹಿಂದಿ, ಇಂಗ್ಲಿಷ್ ಮತ್ತು ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ 'ಮಾ ವಂದೇ' ಪ್ಯಾನ್ ಇಂಡಿಯಾ ಯೋಜನೆಯಾಗಲಿದ್ದು, ಮೋದಿ ಅವರ ಬಾಲ್ಯದಿಂದ ಹಿಡಿದು ರಾಷ್ಟ್ರೀಯ ನಾಯಕನಾಗಿ ಅವರ ಉದಯದವರೆಗಿನ ಪ್ರಯಾಣವನ್ನು ಚಿತ್ರಿಸುತ್ತದೆ. ವಿಶೇಷವಾಗಿ ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರೊಂದಿಗಿನ ಸಂಬಂಧದ ಮೇಲೆ ಒತ್ತು ನೀಡುತ್ತದೆ. 'ತಾಯಿಯ ಇಚ್ಛಾಶಕ್ತಿ ಮತ್ತು ಪ್ರಭಾವದಲ್ಲಿ ಈ ಕಥೆಯು ಬೇರೂರಿದೆ' ಎಂದರು.
ಈ ಚಿತ್ರವು ಪ್ರಬಲ ತಾಂತ್ರಿಕ ತಂಡವನ್ನು ಹೊಂದಿದ್ದು, ಕೆಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಅವರ ಸಂಕಲನ, ಸಾಬು ಸಿರಿಲ್ ಅವರ ನಿರ್ಮಾಣ ವಿನ್ಯಾಸ, ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆ ಮತ್ತು ಕಿಂಗ್ ಸೊಲೊಮನ್ ಅವರ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ.
Advertisement