ಉದಿತ್ ನಾರಾಯಣ್
ಉದಿತ್ ನಾರಾಯಣ್

Video viral: ಲೈವ್ ಶೋನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳೆಯ ತುಟಿಗೆ ಚುಂಬಿಸಿದ ಗಾಯಕ ಉದಿತ್ ನಾರಾಯಣ್!

ಈ ಕುರಿತು ಗಾಯಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ವಿಡಿಯೋವನ್ನು ಹಂಚಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published on

ಮುಂಬೈ: ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಲೈವ್ ಶೋ ವೇಳೆ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಯೊಬ್ಬರ ತುಟಿಗಳಿಗೆ ಮುತ್ತಿಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಯಾವಾಗಿನ ವಿಡಿಯೋ ಎಂಬುದರ ಬಗ್ಗೆ ತಿಳಿದಿಲ್ಲದಿದ್ದರೂ, ಗಾಯಕನ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ವಿಡಿಯೋದಲ್ಲಿ, ಉದಿತ್ ನಾರಾಯಣ್ ಅವರು ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಟನೆಯ ಚಿತ್ರದ 'ಟಿಪ್ ಟಿಪ್ ಬರ್ಸಾ ಪಾನಿ' ಎಂಬ ಪ್ರಸಿದ್ಧ ಗೀತೆಯನ್ನು ಹಾಡುತ್ತಿರುವಾಗ, ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ವೇದಿಕೆ ಬಳಿಗೆ ಬರುತ್ತಾರೆ. ಆಗ ಸೆಲ್ಫಿಗೆ ಫೋಸ್ ನೀಡಲೆಂದು ಉದಿತ್ ನಾರಾಯಣ್ ಅವರು ಕೆಳಗಡೆ ಕುಳಿತುಕೊಳ್ಳುತ್ತಾರೆ. ಈ ವೇಳೆ ಮಹಿಳೆ ಅವರ ಕೆನ್ನೆಗೆ ಚುಂಬಿಸುತ್ತಾರೆ. ಇಷ್ಟಕ್ಕೇ ಸುಮ್ನನಾಗದ ಉದಿತ್ ಮಹಿಳೆಯ ತುಟಿಗಳಿಗೆ ಮುತ್ತು ನೀಡುತ್ತಾರೆ. ಈ ವಿಡಿಯೋ ಇದೀಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಗಾಯಕನ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ಗಾಯಕ ಆದಿತ್ಯ ನಾರಾಯಣ್ ಅವರ ತಂದೆಯಾಗಿರುವ ಉದಿತ್ ನಾರಾಯಣ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ವಿಡಿಯೋವನ್ನು ಹಂಚಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'AI ಅಪಾಯಕಾರಿಯಾಗುತ್ತಿದೆ' ಎಂದು ಬಳಕೆದಾರರೊಬ್ಬರು ಹೇಳಿದ್ದರೆ, 'ಇದು AI ರಚಿಸಿರುವ ವಿಡಿಯೋ ಅಲ್ಲ. ಗಾಯಕ ತಾನೇ ತನ್ನ ಸಂಪೂರ್ಣ ಪರಂಪರೆಯನ್ನು ನಾಶಪಡಿಸಿಕೊಂಡರು. ಇದು ಹಳೆಯ ವಿಡಿಯೋ' ಎಂದು ಮತ್ತೊಬ್ಬರು ಹೇಳಿದ್ದಾರೆ.

'ಖ್ಯಾತ ಗಾಯಕರಾದವರು ಸಾರ್ವಜನಿಕವಾಗಿ ತನ್ನ ನಡೆಗಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು' ಎಂದು ಮತ್ತೋರ್ವ ನೆಟಿಜನ್ ಹೇಳಿದ್ದಾರೆ.

69 ವರ್ಷದ ಉದಿತ್ ನಾರಾಯಣ್ ಅವರು ಹಿಂದಿ, ತೆಲುಗು, ಕನ್ನಡ, ತಮಿಳು, ಬಂಗಾಳಿ, ಸಿಂಧಿ, ಒಡಿಯಾ, ಭೋಜ್‌ಪುರಿ, ನೇಪಾಳಿ, ಮಲಯಾಳಂ, ಅಸ್ಸಾಮಿ, ಬಾಘೇಲಿ ಮತ್ತು ಮೈಥಿಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತ ಸರ್ಕಾರವು ಅವರಿಗೆ 2009 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಗಾಯಕರ ಕೊಡುಗೆಯನ್ನು ಗುರುತಿಸಿ, ನೇಪಾಳದ ರಾಜ ಬೀರೇಂದ್ರ ಬೀರ್ ಬಿಕ್ರಮ್ ಶಾ ದೇವ್ ಅವರು ಭಾರತೀಯ ಸಿನಿಮಾ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ 2001ರಲ್ಲಿ 'ಆರ್ಡರ್ ಆಫ್ ಗೂರ್ಖಾ ದಕ್ಷಿಣ ಬಹು' ಮತ್ತು ಭೋಜ್‌ಪುರಿ ಚಿತ್ರರಂಗಕ್ಕೆ ಅವರ ಕೊಡುಗೆಗಾಗಿ 'ಚಿತ್ರಗುಪ್ತ ಸಿನೇಯಾತ್ರಾ ಸಮ್ಮಾನ್ 2015' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

X

Advertisement

X
Kannada Prabha
www.kannadaprabha.com