
ಚೆನ್ನೈ: ಕನ್ನಡ ಚಿತ್ರ ‘ಪಲ್ಲವಿ ಅನು ಪಲ್ಲವಿ’ಗೆ ಈಗ 42 ವರ್ಷ ಪೂರೈಸಿದೆ. ನಟ ಅನಿಲ್ ಕಪೂರ್ ಮಂಗಳವಾರ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಇಳಯರಾಜ ಅವರ ಸಂಗೀತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಸಂಗೀತವು 'ಕಾಲಾತೀತ' ಎಂದಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿರುವ ನಟ, ಪಲ್ಲವಿ ಅನು ಪಲ್ಲವಿ ಚಿತ್ರದ ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. '42 ವರ್ಷ ಕಳೆದಿದೆ ಮತ್ತು ಇಳಯರಾಜ ಸರ್ ಅವರ ಮಧುರ ಗೀತೆಗಳು ಇನ್ನೂ ಶಕ್ತಿಯುತವಾಗಿ ಪ್ರತಿಧ್ವನಿಸುತ್ತಿವೆ. ಪಲ್ಲವಿ ಅನು ಪಲ್ಲವಿ ಚಿತ್ರ 42 ವರ್ಷಗಳನ್ನು ಪೂರೈಸಿದೆ. ಆದರೆ, ಚಿತ್ರದ ಸಂಗೀತವು ಶಾಶ್ವತವಾಗಿ ಉಳಿದಿದೆ!' ಎಂದು ಬರೆದಿದ್ದಾರೆ.
ಪಲ್ಲವಿ ಅನು ಪಲ್ಲವಿ ಚಿತ್ರವು ಹಲವಾರು ಕಾರಣಗಳಿಗಾಗಿ ವಿಶಿಷ್ಟವಾಗಿದ್ದು, ಈ ಚಿತ್ರದ ಮೂಲಕ ಮಣಿರತ್ನಂ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇಂದು ದೇಶದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
ಈ ಚಿತ್ರಕ್ಕೆ ತಮಿಳು ಚಿತ್ರರಂಗದ ಮತ್ತೊಬ್ಬ ದಿಗ್ಗಜ ಬಾಲು ಮಹೇಂದ್ರ ಅವರ ಛಾಯಾಗ್ರಹಣವಿದೆ. ಅಲ್ಲದೆ, ಬಿ ಲೆನಿನ್ ಅವರ ಸಂಕಲನವಿದೆ. ಲೆನಿನ್ ಅವರು ಇಂದಿಗೂ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ಸಂಯೋಜನೆಯಿತ್ತು.
1983ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನಿಲ್ ಕಪೂರ್, ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು. ಸಿನಿಮಾ ನಿರ್ಮಾಣದಲ್ಲಿ ಯಾವುದೇ ತರಬೇತಿ ಪಡೆದಿಲ್ಲದ ಮಣಿರತ್ನಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬಾಲು ಮಹೇಂದ್ರ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತು.
ಕೇವಲ ಇಳಯರಾಜರ ಹಾಡುಗಳಷ್ಟೇ ಜನಮೆಚ್ಚುಗೆ ಗಳಿಸಿರಲಿಲ್ಲ. ಅವರ ಹಿನ್ನೆಲೆ ಸಂಗೀತವು ಸಹ ಮಹಾಕಾವ್ಯವಾಗಿತ್ತು.
ಪಲ್ಲವಿ ಅನು ಪಲ್ಲವಿ ಚಿತ್ರವು ಇಬ್ಬರು ಶ್ರೇಷ್ಠರಾದ ಮಣಿರತ್ನಂ ಮತ್ತು ಇಳಯರಾಜ ನಡುವಿನ ಬಾಂಧವ್ಯದ ಆರಂಭಕ್ಕೆ ನಾಂದಿಯಾಯಿತು. ಬಳಿಕ ಇಳಯರಾಜ ಅವರು ಮಣಿರತ್ನಂ ಅವರ ಮುಂದಿನ ಒಂಬತ್ತು ಚಿತ್ರಗಳಿಗೆ ಕೆಲಸ ಮಾಡಿದರು. ಇವೆಲ್ಲವೂ ಹಿಟ್, ಸೂಪರ್‌ಹಿಟ್ ಅಥವಾ ಬ್ಲಾಕ್‌ಬಸ್ಟರ್ ಸಿನಿಮಾಗಳಾಗಿ ಹೊರಹೊಮ್ಮಿದವು.
Advertisement