
ಸೂರತ್: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025ರ ಪಂದ್ಯಾವಳಿಯ ಲೀಗ್ ಹಂತದ ಕೊನೆಯ ಪಂದ್ಯಗಳು ಸೂರತ್‌ನಲ್ಲಿ ನಡೆಯುತ್ತಿದ್ದು, ಈ ನಡುವೆ ಕರ್ನಾಟಕ ಬುಲ್ಡೋಜರ್ಸ್-ಪಂಜಾಬ್ ಆಟಗಾರರ ನಡುವೆ ಮೈದನಾದಲ್ಲೇ ಜಗಳವಾಗಿದೆ.
ಹೌದು.. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025ರ ಪಂದ್ಯಾವಳಿಯ ಲೀಗ್ ಹಂತದ ಕೊನೆಯ ಪಂದ್ಯಗಳು ಸೂರತ್‌ನಲ್ಲಿ ನಡೆಯುತ್ತಿವೆ. ಶನಿವಾರ ಮತ್ತು ಭಾನುವಾರ ಒಟ್ಟು ನಾಲ್ಕು ಪಂದ್ಯಗಳು ನಡೆಯುತ್ತಿದ್ದು, ಶನಿವಾರ ಸಂಜೆ ಕರ್ನಾಟಕ ಬುಲ್ಡೋಜರ್ಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ತಂಡದ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಪಂಜಾಬ್ ತಂಡ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
ಮೈದಾನದಲ್ಲೇ ಜಗಳ, ಕಿಚ್ಚಾ ಸುದೀಪ್ ಫುಲ್ ಗರಂ
ಇನ್ನು ಸೂರತ್‌ನ ಲಾಲ್‌ಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ಪಂಜಾಬ್ ದಿ ಶೇರ್ ಆಟಗಾರರ ನಡುವೆ ಜಗಳ ನಡೆಯಿತು. ಎರಡೂ ತಂಡಗಳ ಆಟಗಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್ ಕೂಡ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡರು.
ಇಷ್ಟಕ್ಕೂ ಆಗಿದ್ದೇನು
ಟಾಸ್ ಗೆದ್ದ ಪಂಜಾಬ್ ದಿ ಶೇರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಉತ್ತಮವಾಗಿಯೇ ಬ್ಯಾಟಿಂಗ್ ಮಾಡಿದ ಪಂಜಾಬ್ ದೊಡ್ಡ ಮೊತ್ತವನ್ನು ಕಲೆಹಾಕಿತು. 6ನೇ ಓವರ್ ನಲ್ಲಿ ಚಂದನ್ ಕುಮಾರ್ ಬೌಲಿಂಗ್ ಮಾಡಲು ಬಂದಾಗ ವಾಗ್ವಾದ ನಡೆಯಿತು. ಪಂಜಾಬ್‌ನ ನಿಂಜಾ ಕ್ರೀಸ್‌ನಲ್ಲಿದ್ದರು, ಬೌಲಿಂಗ್ ಮಾಡಲು ಬಂದ ಚಂದನ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಹೋದರು, ಬಳಿಕ ಚಂದನ್ ಬೌಲಿಂಗ್ ಮಾಡುವಾಗ ನಿಂಜಾ ಅರ್ಧಕ್ಕೆ ತಡೆದರು.
ಇದರಿಂದ ಚಂದನ್ ಕುಮಾರ್ ತಾಳ್ಮೆ ಕಳೆದುಕೊಂಡಾಗ ವಾಗ್ವಾದ ಆರಂಭವಾಯಿತು. ನಿಂಜಾ ಚಂದನ್ ಕುಮಾರ್ ನಡುವೆ ಜೋರು ವಾಗ್ವಾದ ನಡೆಯಿತು. ಸುದೀಪ್ ಇಬ್ಬರನ್ನು ಸಮಾಧಾನ ಮಾಡಲು ಬಂದರೂ ನಿಂಜಾ ಸುದೀಪ್ ಜೊತೆಯೇ ಜೋರು ವಾಗ್ವಾದಕ್ಕಿಳಿದರು. ಬಳಿಕ ಸುದೀಪ್ ಕೂಡ ಕೋಪ ಮಾಡಿಕೊಂಡರು. ಕೂಡಲೇ ಎರಡೂ ತಂಡದ ಉಳಿದ ಆಟಗಾರರ ಆಗಮಿಸಿ ಆಟಗಾರರನ್ನು ಸಮಾಧಾನ ಪಡಿಸಿದರು. ಹಲವು ನಿಮಿಷ ಮೈದಾನದಲ್ಲಿ ವಾಗ್ವಾದ ಮುಂದುವರೆಯಿತು.
ಪರಸ್ಪರ ಸಂಧಾನ
ಅಂತಿಮವಾಗಿ ಎರಡೂ ಕಡೆಯ ಆಟಗಾರರು ಸಮಧಾನಗೊಂಡರು. ನಾಯಕ ಸುದೀಪ್ ನಿಂಜಾ ಬಳಿ ಹೋಗಿ ಮಾತನಾಡಿದರು. ಬಳಿಕ ಪಂದ್ಯ ಸರಾಗವಾಗಿ ಮುಂದುವರೆಯಿತು. ಈ ವೇಳೆ ನಟ ಕಿಚ್ಚಾ ಸುದೀಪ್ ರನ್ನು ನಿಂಜಾ ಅಪ್ಪಿಕೊಂಡು ಸಮಾಧಾನ ಮಾಡಿದರು.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದಿ ಶೇರ್ ಮೊದಲ ಇನ್ನಿಂಗ್ಸ್‌ನ 10 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಕಲೆಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿತು. 30 ರನ್‌ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಪಂಜಾಬ್ 8 ವಿಕೆಟ್ ಕಳೆದುಕೊಂಡು 94 ರನ್ ಗಳಿಸುವ ಮೂಲಕ ಒಟ್ಟು 124 ರನ್‌ಗಳ ಮುನ್ನಡೆ ಪಡೆಯಿತು. 125 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸುವ ಮೂಲಕ 2 ರನ್‌ಗಳಿಂದ ರೋಚಕ ಸೋಲು ಕಂಡಿತು.
ಪಂದ್ಯ ಸೋತರೂ ಸೆಮೀಸ್ ಗೆ ಕರ್ನಾಟಕ
ಇನ್ನು ಈ ಪಂದ್ಯದಲ್ಲಿ ಕಿಚ್ಚಾ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ ತಂಡ ಸೋತರು ಸೆಮಿಫೈನಲ್‌ಗೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ತಾನಾಡಿರುವ 4 ಪಂದ್ಯಗಳಲ್ಲಿ 3 ಪಂದ್ಯ ಜಯಿಸಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ 2.12 ನೆಟ್ ರನ್ ರೇಟ್ ನೊಂದಿಗೆ 6 ಅಂಕಗಳೊಂದಿಗೆ ಸೆಮೀಸ್ ಲಗ್ಗೆ ಇಟ್ಟಿದೆ.
Advertisement