'ಮಿಸ್ಟರ್ ಜಾಕ್' ಚಿತ್ರದಲ್ಲಿ ಗುರು ನಂದನ್ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪಾತ್ರ

ಕಥೆ ಕೇಳಿದಾಗ ನಾವೇ ನಿರ್ಮಾಣ ಮಾಡಬೇಕು ಅಂತನಿಸಿತ್ತು. ಅಷ್ಷೊಂದು ಚೆನ್ನಾಗಿತ್ತು ಈ ಕಥೆ. ಇದುವರೆಗೂ ಸ್ಟ್ಯಾಂಡ್ ಅಪ್​ ಕಾಮಿಡಿಯನ್​​ ಬಗ್ಗೆ ಕನ್ನಡದಲ್ಲಿ ಯಾರೊಬ್ಬರೂ ಚಿತ್ರ ಮಾಡಿರಲಿಲ್ಲ.
ಮಿಸ್ಟರ್ ಜಾಕ್ ಚಿತ್ರತಂಡ
ಮಿಸ್ಟರ್ ಜಾಕ್ ಚಿತ್ರತಂಡ
Updated on

First Rank Raju ಖ್ಯಾತಿಯ ಗುರುನಂದನ್‍ ಅವರು 'ಮಂಡಿಮನೆ ಟಾಕೀಸ್‍' ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು, ಅದರಡಿ ಸ್ನೇಹಿತರ ಜೊತೆಗೂಡಿ ಒಂದು ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ‌ ಪುನೀತ್ ರಾಜ್‍ಕುಮಾರ್ ಕೆಲ ತಿಂಗಳ ಹಿಂದೆ ಕ್ಲ್ಯಾಪ್ ಮಾಡಿ ಚಾಲನೆ ನೀಡಿದ್ದರು. ಇದೀಗ ಚಿತ್ರೀಕರಣ ಅಂತಿಮ ಹಂತ ತಲುಪಿದೆ.

ಚಿತ್ರಕ್ಕೆ 'ಮಿಸ್ಟರ್ ಜಾಕ್' ಎಂಬ ಶೀರ್ಷಿಕೆ ಇಡಲಾಗಿದ್ದು, ಟೈಟಲ್​ ರಿವೀಲ್​​ ಸಮಾರಂಭದಲ್ಲಿ ಚಿತ್ರತಂಡದವರು ಹಾಜರಿದ್ದರು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸುಮಂತ್ ಗೌಡ ಮಾತನಾಡಿ, "ಇದು ನನ್ನ ಚೊಚ್ಚಲ ಚಿತ್ರ. ಮೊದಲು ಗುರುನಂದನ್‍ ಅವರಲ್ಲಿ ಕಥೆ ಹೇಳಿದೆ, ಅವರಿಗೆ ಇಷ್ಟವಾಯಿತು. ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದರು. ಇಲ್ಲಿ ನಾಯಕನ ಹೆಸರು ಜಾನಕಿರಾಮ್‍. ಸ್ಟ್ಯಾಂಡ್​ ಅಪ್​ ಕಾಮಿಡಿಯನ್ಸ್ ತಮ್ಮ ಹೆಸರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಹಾಗೇ ಇಲ್ಲಿ ನಾಯಕ ನಟ ಮಿಸ್ಟರ್ ಜಾಕ್ ಎಂದು ಗುರುತಿಸಿಕೊಳ್ಳುತ್ತಾನೆ. ಇದೊಂದು ರೊಮ್ಯಾಂಟಿಕ್‍ ಕಾಮಿಡಿ ಮತ್ತು ಫ್ಯಾಮಿಲಿ ಡ್ರಾಮಾ. ಗುರುನಂದನ್‍ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ" ಎಂದು ತಿಳಿಸಿದರು.

ಕಥೆ ಕೇಳಿದಾಗ ನಾವೇ ನಿರ್ಮಾಣ ಮಾಡಬೇಕು ಅಂತನಿಸಿತ್ತು. ಅಷ್ಷೊಂದು ಚೆನ್ನಾಗಿತ್ತು ಈ ಕಥೆ. ಇದುವರೆಗೂ ಸ್ಟ್ಯಾಂಡ್ ಅಪ್​ ಕಾಮಿಡಿಯನ್​​ ಬಗ್ಗೆ ಕನ್ನಡದಲ್ಲಿ ಯಾರೊಬ್ಬರೂ ಚಿತ್ರ ಮಾಡಿರಲಿಲ್ಲ. ಅಂಥದ್ದೊಂದು ಪ್ರಯತ್ನವನ್ನು ನಾವು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ನಮ್ಮ ಸ್ನೇಹಿತರೆಲ್ಲರೂ ಸಹ ನಿರ್ಮಾಪಕರಾಗಿ ಕೈ ಜೋಡಿಸಿದರು. ಹಾಗೇ ಚಿತ್ರೀಕರಣ ಸಹ ಮುಕ್ತಾಯವಾಗಿದೆ.

ಬೆಂಗಳೂರು ಸುತ್ತಮುತ್ತ ಶೇ.75ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಕೊನೆ ಹಂತದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಶುರುವಾಗಲಿದೆ. ಒಂದು ಹಾಡು ಹೊರತುಪಡಿಸಿದರೆ, ಜನವರಿಯಲ್ಲಿ ಮಿಕ್ಕೆಲ್ಲಾ ಭಾಗದ ಚಿತ್ರೀಕರಣ ಮುಗಿಯಲಿದೆ. ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ನಟ ಗುರುನಂದನ್ ತಿಳಿಸಿದ್ದಾರೆ.

ಮಿಸ್ಟರ್ ಜಾಕ್ ಚಿತ್ರತಂಡ
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪಾತ್ರದಲ್ಲಿ 'ಫಸ್ಟ್ ರ್‍ಯಾಂಕ್ ರಾಜು' ಖ್ಯಾತಿಯ ಗುರುನಂದನ್

ಹಾಸ್ಯ ಮಾಡುವವರ ಹಿಂದಿನ ಕಥೆ ಇದು. ಇಲ್ಲಿ ನಾಯಕ ಸ್ಟ್ಯಾಂಡ್ ಅಪ್​ ಕಾಮಿಡಿಯನ್​​ ಆಗಿ ಕೆಲಸ ಮಾಡುತ್ತಿರುತ್ತಾನೆ. ಅವನ ಹಿಂದಿನ ನೋವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಏನೇ ನೋವಿದ್ದರೂ, ಅದನ್ನು ಹೊರಗೆ ತೋರಿಸದೇ ಎಲ್ಲರನ್ನೂ ನಗಿಸುವುದು, ದೊಡ್ಡ ಸವಾಲಿನ ಕೆಲಸ. ನನ್ನ ಹಿಂದಿನ ಚಿತ್ರಗಳಲ್ಲಿ ಮಾತುಗಳ ಮೂಲಕ ಹಾಸ್ಯ ಇರುತ್ತಿತ್ತು. ಆದರೆ, ಇಲ್ಲಿ ಸ್ವಾಭಾವಿಕವಾಗಿ ಮತ್ತು ತಕ್ಷಣವೇ ನಗಿಸುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಿರ್ದೇಶಕರು ಹೊಸಬರಾದರೂ, ಅನುಭವಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಈ ಚಿತ್ರದಲ್ಲಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ನನ್ನ ಪಾತ್ರ ಸಂಪೂರ್ಣ ಸಸ್ಪೆನ್ಸ್‌ನಿಂದ ಕೂಡಿದೆ. ಈ ಚಿತ್ರ ಕೇವಲ ಕಾಮಿಡಿ ಅಲ್ಲ; ಇದರಲ್ಲಿ ಸಾಕಷ್ಟು ಸೆಂಟಿಮೆಂಟ್ ಕೂಡ ಇದೆ" ಎಂದು ಅವರು ಹೇಳಿದ್ದಾರೆ.

ಚಿತ್ರದಲ್ಲಿ ಮಿತ್ರ, ಧರ್ಮಣ್ಣ ಕಡೂರ್, ಗೋಪಾಲಕೃಷ್ಣ ದೇಶಪಾಂಡೆ, ಗಿರಿ, ಸುಶ್ಮಿತಾ ಮತ್ತು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕಾರ್ತಿಕ್ ಪತ್ತಾರ್ ಸಹ ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಶಿವಸೇನಾ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com