
ಶಂಕರ್ ನಿರ್ದೇಶನದ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಗೇಮ್ ಚೇಂಜರ್' ಸಿನಿಮಾ ಸಂಕ್ರಾಂತಿಗೂ ಮುನ್ನ ಜನವರಿ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಚಿತ್ರದ ಮುಂಗಡ ಬುಕಿಂಗ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಕಲೆಕ್ಷನ್ 13.87 ಕೋಟಿ ರೂ. ದಾಟಿದೆ.
10,858 ಶೋಗಳಿಗೆ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟದ ಮೂಲಕ 'ಗೇಮ್ ಚೇಂಜರ್' ಸಿನಿಮಾ ಇಲ್ಲಿಯವರೆಗೆ 13.87 ಕೋಟಿ ರೂ. ಸಂಗ್ರಹಿಸಿದೆ. ಆಂಧ್ರಪ್ರದೇಶದಲ್ಲಿ 7.52 ಕೋಟಿ ರೂ. ಹಾಗೂ ತೆಲಂಗಾಣದಲ್ಲಿ 3.3 ಕೋಟಿ ರೂ. ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ 59.01 ಲಕ್ಷ, ಕರ್ನಾಟಕದಲ್ಲಿ 1.06 ಕೋಟಿ ರೂ. ಹಾಗೂ ಕೇರಳದಲ್ಲಿ 2.6 ಲಕ್ಷ ಗಳಿಸಿದೆ ಎಂದು ಟ್ರೇಡ್ ವೆಬ್‌ಸೈಟ್ ವರದಿ ಮಾಡಿದೆ.
ಶಂಕರ್ ನಿರ್ದೇಶನದ 'ಇಂಡಿಯನ್ 2' ಚಿತ್ರವು 10.98 ಕೋಟಿ ರೂ.ಗಳನ್ನು ಮುಂಗಡ ಬುಕ್ಕಿಂಗ್ ಮೂಲಕ ಸಂಗ್ರಹಿಸಿತ್ತು. 2022ರಲ್ಲಿ ತೆರೆಕಂಡ ರಾಮ್ ಚರಣ್ ಮತ್ತು ಮತ್ತು ಚಿರಂಜೀವಿ ಅಭಿನಯದ 'ಆಚಾರ್ಯ' 15.75 ಕೋಟಿ ರೂ. ಗಳಿಸಿತ್ತು.
ಗೇಮ್ ಚೇಂಜರ್ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದಿಂದ ಅನುಮತಿ ಪಡೆದಿದೆ. ಅಲ್ಲದೆ, ಆಂಧ್ರಪ್ರದೇಶದಲ್ಲಿ ಬೆಳಗಿನ ಜಾವ 1 ಗಂಟೆಯಿಂದ ಮತ್ತು ತೆಲಂಗಾಣದಲ್ಲಿ ಮುಂಜಾನೆ 4 ಗಂಟೆಯಿಂದ ಚಿತ್ರ ಪ್ರದರ್ಶನಕ್ಕೆ ಅವಕಾಶ ಪಡೆದುಕೊಂಡಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಿನಿಮಾ 122 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ. ಈ ಪೈಕಿ ನಿಜಾಮ್ ಪ್ರದೇಶದಿಂದಲೇ 43 ಕೋಟಿ ರೂ. ಸಂಗ್ರಹವಾಗಲಿದೆ. ಆದರೆ, ಈ ಚಿತ್ರವನ್ನು ಲಾಭದಾಯಕವೆಂದು ಪರಿಗಣಿಸಬೇಕಾದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಟಿಕೆಟ್ ಮಾರಾಟದಿಂದ ಸಂಗ್ರಹವಾಗುವ ಒಟ್ಟು ಆದಾಯ 225 ಕೋಟಿ ರೂ. ಆಗಿರಬೇಕಾಗಿದೆ. ತನ್ನ ಸಂಪೂರ್ಣ ಹೂಡಿಕೆಯನ್ನು ಹಿಂಪಡೆಯಲು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಬೇಕಾಗಿದೆ.
ಕರ್ನಾಟಕದಲ್ಲಿ ಚಿತ್ರವು 14 ಕೋಟಿ ರೂ., ತಮಿಳುನಾಡಿನಲ್ಲಿ 15 ಕೋಟಿ ರೂ. ಮತ್ತು ಕೇರಳದಲ್ಲಿ 2 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಹಿಂದಿ ಭಾಷೆಯಲ್ಲಿ 42 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಇದರೊಂದಿಗೆ ವಿದೇಶಿ ಮಾರುಕಟ್ಟೆಯಲ್ಲಿ 25 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆಯಿದೆ. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಲು ಈ ಚಿತ್ರವು ವಿಶ್ವದಾದ್ಯಂತ 425 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಬೇಕಿದೆ.
Advertisement