
ಶಂಕರ್ ನಿರ್ದೇಶನದ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟನೆಯ 'ಗೇಮ್ ಚೇಂಜರ್' ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಬಿಡುಗಡೆಯಾದ ಮೊದಲನೇ ದಿನ ಬರೋಬ್ಬರಿ 186 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಚಿತ್ರ ಬಿಡುಗಡೆಯಾದ ಎರಡನೇ ದಿನ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡುಬಂದಿದೆ.
ರಾಮ್ ಚರಣ್ ಮತ್ತು ಕಿಯಾರಾ ಜೊತೆಗೆ ಅಂಜಲಿ, ಎಸ್‌ಜೆ ಸೂರ್ಯ ಅಭಿನಯದ ಗೇಮ್ ಚೇಂಜರ್ ಚಿತ್ರವು ಸಂಕ್ರಾಂತಿ ಹಬ್ಬವನ್ನು ದೃಷ್ಟಿಯಲ್ಲಿಟ್ಟುಕೊಂಡು ಜನವರಿ 10 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸ್ಥಿರವಾಗಿ ಪ್ರದರ್ಶನ ನೀಡುತ್ತಿದೆ ಮತ್ತು ಬಿಡುಗಡೆಯಾದ ಎರಡನೇ ದಿನದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 21.05 ಕೋಟಿ ರೂ. ಸಂಗ್ರಹಿಸಿದ್ದು, ಒಟ್ಟು ಕಲೆಕ್ಷನ್ 72.5 ಕೋಟಿ ರೂ. ಆಗಿದೆ ಎಂದಿದೆ.
ಶಂಕರ್ ನಿರ್ದೇಶನದ ಹಿಂದಿನ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಇಂಡಿಯನ್ 2' ಚಿತ್ರಕ್ಕೆ ಹೋಲಿಸಿದರೆ, ಗೇಮ್ ಚೇಂಜರ್ ಚಿತ್ರದ ಕಲೆಕ್ಷನ್ ಉತ್ತಮವಾಗಿದೆ. ಇಂಡಿಯನ್ 2 ತನ್ನ ಆರಂಭಿಕ ದಿನದಲ್ಲಿ 25.6 ಕೋಟಿ ರೂ. ಸಂಗ್ರಹಿಸಿತ್ತು. ಭಾರತದಲ್ಲಿ ಒಟ್ಟು 81.32 ಕೋಟಿ ರೂ. ಗಳಿಕೆ ಕಂಡಿತ್ತು.
ವಾರಾಂತ್ಯದ ಹೊರತಾಗಿಯೂ, ಗೇಮ್ ಚೇಂಜರ್ ತೆಲುಗು ಆವೃತ್ತಿಯು ಬೆಳಿಗ್ಗೆ ಕೇವಲ ಶೇ 20.66, ಮಧ್ಯಾಹ್ನದ ಪ್ರದರ್ಶನಗಳಿಗೆ ಶೇ 31.52, ಸಂಜೆಯ ಪ್ರದರ್ಶನಗಳಿಗೆ ಶೇ 36.09 ಮತ್ತು ರಾತ್ರಿ ಪ್ರದರ್ಶನಗಳಿಗೆ ಶೇ 36.48 ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ತಮಿಳು ಮತ್ತು ಹಿಂದಿ ಆವೃತ್ತಿಗಳಿಗೆ ಹೋಲಿಸಿದರೆ ಇದು ಉತ್ತಮವಾಗಿದೆ.
ಗೇಮ್ ಚೇಂಜರ್ ಸಿನಿಮಾ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಚಿತ್ರದಲ್ಲಿ ರಾಮ್ ಚರಣ್ ಅವರ ನಟನೆಯನ್ನು ಹೊರತುಪಡಿಸಿ ವಿಶೇಷವಾದದ್ದು ಏನೂ ಇಲ್ಲ ಎಂದು ಸಿನಿಮಾ ವಿಮರ್ಷಕರು ಹೇಳುತ್ತಿದ್ದಾರೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಮೇಲೆ ವ್ಯಾಪಕ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ, ಇದೀಗ ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಮತ್ತಷ್ಟು ಪೈಪೋಟಿ ಉಂಟಾಗುವ ಸಾಧ್ಯತೆ ಇದೆ.
ಬಾಬಿ ಕೊಲ್ಲಿ ನಿರ್ದೇಶನದ ನಂದಮೂರಿ ಬಾಲಕೃಷ್ಣ, ಬಾಬಿ ಡಿಯೋಲ್, ಊರ್ವಶಿ ರೌಟೇಲಾ, ಶ್ರದ್ಧಾ ಶ್ರೀನಾಥ್ ಮತ್ತು ಪ್ರಜ್ಞಾ ಜೈಸ್ವಾಲ್ ಅಭಿನಯದ 'ಡಾಕು ಮಹಾರಾಜ್' ಚಿತ್ರ ಜನವರಿ 12ರಂದು ಬಿಡುಗಡೆಯಾಗಿದೆ. ಅನಿಲ್ ರವಿಪುಡಿ ನಿರ್ದೇಶನದ ವೆಂಕಟೇಶ್, ಮೀನಾಕ್ಷಿ ಚೌಧರಿ ಮತ್ತು ಐಶ್ವರ್ಯಾ ರಾಜೇಶ್ ಅಭಿನಯದ 'ಸಂಕ್ರಾಂತಿಕಿ ವಸ್ತುನಾಂ' ಚಿತ್ರ ಜನವರಿ 2ಕ್ಕೆ ಬಿಡುಗಡೆಯಾಗಿದೆ. ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ಚರಣ್ ಅವರು ರಾಮ್ ನಂದನ್ ಎಂಬ ಐಎಎಸ್ ಅಧಿಕಾರಿಯಾಗಿ ಮತ್ತು ಅಪ್ಪಣ್ಣ ಎಂಬ ಕಾರ್ಯಕರ್ತನಾಗಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅವರು ದೀಪಿಕಾ ಪಾತ್ರದಲ್ಲಿ, ಅಂಜಲಿಯವರು ಪಾರ್ವತಿ ಪಾತ್ರದಲ್ಲಿ ನಟಿಸಿದ್ದರೆ, ಸೂರ್ಯ ಮೋಪಿದೇವಿ ಎಂಬ ಭ್ರಷ್ಟ ರಾಜಕಾರಣಿಯಾಗಿ ನಟಿಸಿದ್ದಾರೆ. ಶ್ರೀಕಾಂತ್, ಸಮುದ್ರಕಣಿ, ಸುನೀಲ್, ಬ್ರಹ್ಮಾನಂದಂ, ವೆನ್ನೆಲ ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement