
ನವದೆಹಲಿ: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಶೀಘ್ರದಲ್ಲೇ ತಾನು ಚಿತ್ರೀಕರಣಕ್ಕೆ ಮರಳುವೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಬಲಗಾಲಿಗೆ ಪೆಟ್ಟಾಗಿರುವ ಫೋಟೊವನ್ನು ಹಂಚಿಕೊಂಡಿರುವ 'ಪುಷ್ಪ 2' ಚಿತ್ರದ ತಾರೆ ರಶ್ಮಿಕಾ, ವರ್ಕೌಟ್ ಮಾಡುವ ವೇಳೆ ಜಿಮ್‌ನಲ್ಲಿ ಗಾಯಗೊಂಡಿದ್ದು, ಇದೀಗ ವಿಶ್ರಾಂತಿ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
'ಅನಿಮಲ್','ಭೀಷ್ಮ' ಮತ್ತು 'ಗೀತಾ ಗೋವಿಂದಂ' ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ 28 ವರ್ಷದ ನಟಿ ರಶ್ಮಿಕಾರ ಕಾಲಿಗೆ ಗಾಯವಾಗಿದೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
'ಹೊಸ ವರ್ಷವು ನೋವಿನಿಂದಲೇ ಆರಂಭವಾಯಿತು, ನನ್ನ ಪವಿತ್ರ ಜಿಮ್ ದೇಗುಲದಲ್ಲಿ ನಾನು ಗಾಯಗೊಂಡಿದ್ದೇನೆ' ಎಂದು ಶೀರ್ಷಿಕೆ ನೀಡಿರುವ ನಟಿ, ಗಾಯದಿಂದಾಗಿ ಚಿತ್ರೀಕರಣ ವಿಳಂಬವಾಗುತ್ತಿರುವುದಕ್ಕಾಗಿ ತಮ್ಮ ಮುಂಬರುವ ಚಿತ್ರಗಳಾದ ಥಾಮ, ಸಿಕಂದರ್ ಮತ್ತು ಕುಬೇರ ಚಿತ್ರದ ನಿರ್ದೇಶಕರ ಬಳಿ ಕ್ಷಮೆಯಾಚಿಸಿದ್ದಾರೆ.
'ಈಗ ನಾನು ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ 'ಭರವಸೆಯ ಮೋಡ್'ನಲ್ಲಿದ್ದೇನೆ. ನಾನು ಯಾವಾಗ ಹುಷಾರಾಗುತ್ತೇನೆ ಎಂಬುದು ದೇವರಿಗೆ ಮಾತ್ರ ಗೊತ್ತು. ಹಾಗಾಗಿ ನಾನು ಥಾಮ, ಸಿಕಂದರ್ ಮತ್ತು ಕುಬೇರ ಚಿತ್ರದ ಸೆಟ್‌ಗಳಿಗೆ ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂಬ ಭರವಸೆಯಲ್ಲಿದ್ದೇನೆ. ಈ ಚಿತ್ರಗಳ ನಿರ್ದೇಶಕರಿಗೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕಾಲು ಸರಿಯಾಗಿದೆ ಎಂದ ಕೂಡಲೇ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ' ಎಂದು ಅವರು ಬರೆದಿದ್ದಾರೆ.
ರಶ್ಮಿಕಾ ಅವರು ಕೊನೆಯದಾಗಿ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಈ ಚಿತ್ರವು 2021ರ 'ಪುಷ್ಪ: ದಿ ರೈಸ್'ನ ಮುಂದುವರಿದ ಭಾಗವಾಗಿದೆ. ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಪ್ರಕಾರ ಪುಷ್ಪ 2 ಚಿತ್ರ 1,831 ಕೋಟಿ ರೂ.ಗಳನ್ನು ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಚಿತ್ರತಂಡ ಶನಿವಾರ 'ಪುಷ್ಪ 2' ಚಿತ್ರದ 20 ನಿಮಿಷಗಳ ವಿಸ್ತೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ.
Advertisement