
ಬೆಂಗಳೂರು: ಫಿನಾಲೆಗೆ ಇನ್ನೇನು ಒಂದೇ ವಾರ ಬಾಕಿ ಇರುವಾಗ ಶನಿವಾರವೇ ಬಿಗ್ ಬಾಸ್ ಮನೆಯಿಂದ ಗೌತಮಿ ಎಲಿಮಿನೇಟ್ ಆಗಿದ್ದಾರೆ. ಆದರೆ, ಇಷ್ಟಕ್ಕೇ ಸ್ಪರ್ಧಿಗಳು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಏಕೆಂದರೆ, ಈ ಬಾರಿ ಡಬಲ್ ಎಲಿಮಿನೇಷನ್ ಇರುತ್ತದೆ ಎಂದು ಬಿಗ್ ಬಾಸ್ ಘೋಷಿಸಿದ್ದರು. ಅದರಂತೆ ಇಂದು ಭಾನುವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರ ಪ್ರಯಾಣ ಅಂತ್ಯವಾಗಲಿದೆ.
ಕಳೆದ ವಾರ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಹಲವು ಆಟಗಳನ್ನು ಆಡಿಸಿ, ಅದರಲ್ಲಿ ಅಧಿಕ ಅಂಕ ಪಡೆದವರು ಎಲಿಮಿನೇಷನ್‌ನಿಂದ ಪಾರಾಗುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಹೀಗಾಗಿ ಎಲಿಮಿನೇಷನ್ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮತ್ತು ಫೈನಲ್ ಪ್ರವೇಶಿಸಲು ಸ್ಪರ್ಧಿಗಳ ನಡುವೆ ಕಾದಾಟ ಜೋರಾಗಿಯೇ ಇತ್ತು. ಕಳೆದ ವಾರ ನಡೆದ ಟಾಸ್ಕ್‌ನಲ್ಲಿ ಅಂತಿಮವಾಗಿ ಧನರಾಜ್ ಗೆದ್ದು ಎಲಿಮಿನೇಷನ್‌ನಿಂದ ಪಾರಾಗಿದ್ದರು. ಮಿಡ್ ವೀಕ್ ಎಲಿಮಿನೇಷನ್ ನಡೆಸಲು ಬುಧವಾರದಿಂದಲೇ ಬಾಗಿಲು ತೆರೆದಿದ್ದ ಬಿಗ್ ಬಾಸ್, ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ ಎಂದು ಗುರುವಾರದ ಸಂಚಿಕೆಯಲ್ಲಿ ಟ್ವಿಸ್ಟ್ ನೀಡಿತ್ತು.
ಮರುದಿನ ಬೆಳಗ್ಗೆ ಮಿಡ್ ವೀಕ್ ಎಲಿಮಿನೇಷನ್ ತಪ್ಪಲು ಕಾರಣ ಏನು ಎಂಬುದನ್ನು ಬಿಗ್ ಬಾಸ್ ವಿವರಿಸಿದ್ದರು. ಅಂತಿಮ ಟಾಸ್ಕ್ ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಆಡಿದ್ದರಿಂದಲೇ ಅವರು ಗೆದ್ದಿದ್ದರು. ಇದರಿಂದ ಇತರ ಸ್ಪರ್ಧಿಗಳಿಗೆ ತೊಂದರೆಯಾಗುವುದಕ್ಕೆ ಬಿಗ್ ಬಾಸ್ ಬಿಡುವುದಿಲ್ಲ. ಅದಕ್ಕಾಗಿಯೇ ಮಿಡ್ ವೀಕ್ ಎನಿಮಿನೇಷನ್ ರದ್ದು ಮಾಡಲಾಗಿದೆ ಎಂದು ಹೇಳಿದ್ದರು. ಕನ್ನಡಿಯನ್ನು ನೋಡಿ ಆಡಿದ್ದಾಗಿ ಧನರಾಜ್ ಒಪ್ಪಿಕೊಂಡಿದ್ದರು.
ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದರೂ ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದರು. ಹನುಮಂತು ಮಾತ್ರ ಫಿನಾಲೆಗೆ ನೇರವಾಗಿ ಟಿಕೆಟ್ ಪಡೆದುಕೊಂಡಿದ್ದು, ಉಳಿದ ಸ್ಪರ್ಧಿಗಳ ತಲೆಮೇಲೆ ನಾಮಿನೇಷನ್ ತೂಗುಗತ್ತಿ ಇತ್ತು. ಗೌತಮಿ, ಉಗ್ರಂ ಮಂಜು, ಮೋಕ್ಷಿತಾ, ರಜತ್, ಭವ್ಯಾ, ತ್ರಿವಿಕ್ರಮ್ ಮತ್ತು ಧನರಾಜ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಹನುಮಂತು ಫಿನಾಲೆಗೆ ಟಿಕೆಟ್ ಗೆದ್ದು, ಮನೆಯ ಅಲ್ಟಿಮೇಟ್ ನಾಯಕನಾಗಿ ಆಯ್ಕೆಯಾಗಿದ್ದರು. ಆಗ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡುವುದಾಗಿ ಘೋಷಿಸಿದ್ದರು.
ಶುಕ್ರವಾರ ನಡೆದ ನಾಮಿನೇಷನ್ ಪ್ರಕ್ರಿಯೆ ಬಳಿಕ ಆ ವಿಶೇಷ ಅಧಿಕಾರವನ್ನು ಬಳಸುವಂsತೆ ಬಿಗ್ ಬಾಸ್ ಸೂಚಿಸಿದ್ದರಿಂದ ಹನುಮಂತು ಮೋಕ್ಷಿತಾ ಅವರನ್ನು ಫಿನಾಲೆಗೆ ಆಯ್ಕೆ ಮಾಡಿದ್ದರು. ಬಳಿಕ ತ್ರಿವಿಕ್ರಮ್ ಕೂಡ ಫಿನಾಲೆಗೆ ಆಯ್ಕೆಯಾದರು. ಶನಿವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಾಸಿಟಿವ್ ಗೌತಮಿ ಮನೆಯಿಂದ ಹೊರಬಂದಿದ್ದಾರೆ.
ಇಂದು ನಡೆಯುವ ಕಿಚ್ಚನ ಪಂಚಾಯಿತಿಯಲ್ಲಿ ನಾಮಿನೇಟ್ ಆಗಿರುವ ಭವ್ಯಾ, ಉಗ್ರಂ ಮಂಜು, ರಜತ್ ಮತ್ತು ಧನರಾಜ್ ಪೈಕಿ ಮತ್ತೊಬ್ಬರು ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಮೂಲಗಳ ಪ್ರಕಾರ, ಇಂದು ಧನರಾಜ್ ಅವರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ ಎನ್ನಲಾಗಿದೆ. ಮತ್ತೊಬ್ಬರು ಎಲಿಮಿನೇಟ್ ಆದ ಬಳಿಕ ಮನೆಯಲ್ಲಿ ಆರು ಮಂದಿ ಉಳಿದುಕೊಳ್ಳಲಿದ್ದು, ಮುಂದಿನ ವಾರ ಬಿಗ್ ಬಾಸ್ ಕಿರೀಟ ಯಾರ ಮುಡಿಗೇರಲಿದೆ ಎಂಬುದು ತಿಳಿಯಲಿದೆ.
Advertisement