
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ನಿನ್ನೆಯಷ್ಟೇ ಅದ್ಧೂರಿ ತೆರೆಬಿದ್ದಿದೆ. ಹನುಮಂತು ವಿನ್ನರ್ ಆಗಿದ್ದರೆ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. 50 ದಿನ ಕಳೆದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ ಬಿಗ್ ಬಾಸ್ ಮನೆಗೆ ಹೊಸ ಕಳೆ ತುಂಬಿದ್ದರು. ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈ ಕಾರಣಕ್ಕಾಗಿಯೇ ರಜತ್ ಅವರು ಉಳಿದೆಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಟಾಪ್ 3ನೇ ಸ್ಥಾನಕ್ಕೆ ಬಂದಿದ್ದ ರಜತ್, 2ನೇ ರನ್ನರ್ ಅಪ್ ಆಗಿದ್ದಾರೆ. ಹೀಗಿರುವಾಗಲೇ ರಜತ್ ಮಾಜಿ ಪ್ರೇಯಸಿಯ ಫೋಟೊ ವೈರಲ್ ಆಗುತ್ತಿದೆ.
ರಜತ್ ಮಾಜಿ ಪ್ರೇಯಸಿಯೊಂದಿಗಿರುವ ಹಳೆಯ ಫೋಟೊಗಳು ವೈರಲ್ ಆಗುತ್ತಿದ್ದು, ರಜತ್ ಪತ್ನಿ ಅಕ್ಷತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಫೋಟೊಗಳನ್ನು ಡಿಲೀಟ್ ಮಾಡುವಂತೆ ಅಕ್ಷತಾ ಟ್ರೋಲ್ ಪೇಜ್‌ವೊಂದಕ್ಕೆ ಮೆಸೇಜ್ ಮಾಡಿದ್ದಾರೆ. ಆದರೆ, ಫೋಟೊ ಡಿಲೀಟ್ ಮಾಡಬೇಕೆಂದರೆ ಹಣ ನೀಡಬೇಕು ಎಂದು ಟ್ರೋಲ್ ಪೇಜ್ ಬೇಡಿಕೆಯಿಟ್ಟಿದೆ. ಬಳಿಕ ಅಕ್ಷತಾ, ಅಪರಿಚಿತ ವ್ಯಕ್ತಿಯ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಹಾಕಿದ ಬಳಿಕವೂ ಬೇರೆ ಟ್ರೋಲ್ ಪೇಜ್‌ನಲ್ಲಿ ಫೋಟೊಗಳು ಪೋಸ್ಟ್ ಆಗಿವೆ. ಆಗ ಅಕ್ಷತಾ ಅವರು ಫೋಟೋ ಡಿಲೀಟ್ ಮಾಡುವಂತೆ ಅವರಿಗೂ ಮನವಿ ಮಾಡಿದ್ದಾರೆ. ಆದರೆ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಕ್ಷತಾ ಪಶ್ಟಿಮ ವಿಭಾಗದ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಳಿಕ 10ಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದೀಗ ಬಿಗ್ಬಾಸ್ ಮನೆಯಿಂದ ಹೊರ ಬಂದಿರುವ ರಜತ್ ನೀವು ಬಿಗ್ಬಾಸ್ನಲ್ಲಿ ಇದ್ದಾಗ ನಿಮ್ಮ ಹೆಂಡ್ತಿಗೆ ಬ್ಲಾಕ್ಮೇಲ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, 'ಏನು ತೊಂದರೆ ಇಲ್ಲ, ಟ್ರೋಲ್ ಆಗಲಿ ಬಿಡಿ, ಈಗ ನಾನು ಆಚೆ ಬಂದಿದ್ದೀನಿ ಅಲ್ವಾ, ಎಲ್ಲದನ್ನೂ ನೋಡಿಕೊಳ್ತೀನಿ' ಎಂದಿದ್ದಾರೆ.
ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್, ಯಾರೊಬ್ಬರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಆಟವಾಡಿದರು. ಇದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾದರು. ರಜತ್ ಅವರ ಆಟಕ್ಕೆ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಗೆ ನೀವು ಬಾರದಿದ್ದರೆ ಮನೆ ಸಪ್ಪೆಯಾಗಿರುತ್ತಿತ್ತು ಎಂದಿದ್ದಾರೆ.
2ನೇ ರನ್ನರ್ ಅಪ್ ಆದ ರಜತ್ ಅವರಿಗೆ 7 ಲಕ್ಷ ರೂ. ಹಾಗೂ 3 ಲಕ್ಷ ರೂ. ನಗದನ್ನು ಬಹುಮಾನವಾಗಿ ನೀಡಲಾಯಿತು. ಈ ವೇಳೆ ಮಾತನಾಡಿದ ರಜತ್, ತಾವು ಇಲ್ಲಿಯವರೆಗೆ ಮನೆಯಲ್ಲಿ ಇರಲು ಕಾರಣರಾದ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು.
Advertisement