
ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಹಾಗೂ ರಚಿತರಾಮ್ ಅಭಿನಯದ 'ಸಂಜು ವೆಡ್ಸ್ ಗೀತಾ-2 ಸಿನಿಮಾ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ 2ನೇ ಬಾರಿಗೆ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಈ ಹಿಂದೆ ಜನವರಿ 17 ರಂದು ಚಿತ್ರ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಬಗ್ಗೆ ನಗೆಟಿವ್ ಕಾಮೆಂಟ್ ಹಾಗೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಕೇಳಿಬಂದ ನಂತರ ಚಿತ್ರತಂಡ ಹೆಚ್ಚುವರಿ ಚಿತ್ರೀಕರಣವನ್ನು ಚಿತ್ರಕ್ಕೆ ಮರು ಜೋಡಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ಹೊಸದಾಗಿ ಹಾಸ್ಯ, ಭಾವನಾತ್ಮಕ ಮತ್ತು ಸಾಹಸ ದೃಶ್ಯ ಒಳಗೊಂಡಂತೆ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗುತ್ತಿದೆ.
ಮೊದಲ ಬಾರಿಗೆ ಚಿತ್ರ ಬಿಡುಗಡೆಯಾದಾಗ ಒಂದಷ್ಟು ಆತಂಕ ಸೃಷ್ಟಿಯಾಗಿದ್ದ ಕಾರಣ ಎಲ್ಲವನ್ನೂ ಗಮನಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈಗ ಹೊಸದಾಗಿ ಹೆಚ್ಚುವರಿ ದೃಶ್ಯಗಳು, ಸಂಗೀತ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿ, ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮರು ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಚಿತ್ರ ತಂಡ ತಿಳಿಸಿದೆ.
ಹೆಚ್ಚುವರಿ ಚಿತ್ರೀಕರಣದ ಭಾಗವು ಕೂಡಾ ಸೆನ್ಸಾರ್ ಮಂಡಳಿಯಿಂದ ಅನುಮೋದನೆ ಪಡೆಯಬೇಕಾಗಿದೆ. ಮರು-ಬಿಡುಗಡೆ ದಿನಾಂಕವನ್ನು ಇನ್ನೂ ದೃಢೀಕರಿಸದಿದ್ದರೂ, ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಛಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಶ್ರೀಧರ್ ವಿ ಸಂಗೀತ ಮತ್ತು ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ. ಫೆಬ್ರವರಿ 14 ರಂದು ಚಿತ್ರ ಬಿಡುಗಡೆಯಾಗಬಹುದು ಎಂಬ ವದಂತಿ ಇದೆ. ಆದರೆ ಮರು ಬಿಡುಗಡೆಯ ಅಧಿಕೃತ ದಿನಾಂಕಕ್ಕೆ ಕಾಯಲಾಗುತ್ತಿದೆ.
Advertisement