
ಬೆಂಗಳೂರು: ನಟಿ ಸರೋಜಾ ದೇವಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಡುವೆ ಒಂದು ಕಾಲದಲ್ಲಿ ಪ್ರೀತಿ ಅರಳಿತ್ತು. ರಾಜಕೀಯ ರಂಗಕ್ಕೆ ಆಗಷ್ಟೇ ಎಸ್.ಎಂ. ಕೃಷ್ಣ ಅವರು ಪಾದಾರ್ಪಣೆ ಮಾಡಿದ್ದರು.
ತಮ್ಮ ಬುದ್ದಿವಂತಿಕೆ, ಶಾಂತ ಚಿತ್ತದ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಕೃಷ್ಣ ಅವರು ಕರ್ನಾಟಕದ ಜನತೆಯ ಮನಸ್ಸನ್ನು ಮಾತ್ರವಲ್ಲ ಸರೋಜಾ ದೇವಿಯವರ ಹೃದಯವನ್ನೂ ಗೆದ್ದಿದ್ದರು. ಇವರಿಬ್ಬರ ನಡುವಿನ ಪ್ರೀತಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.
ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಎಂ. ಕೃಷ್ಣ ಯುವ ನಾಯಕರಾಗಿದ್ದಾಗ ಬಿ. ಸರೋಜಾದೇವಿ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಖ್ಯಾತ ನಟಿಯಾಗಿ ಬೆಳೆದಿದ್ದರು. ಅವರ ಸೌಂದರ್ಯ ಮತ್ತು ಅಭಿನಯ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿತ್ತು. ಎಸ್ ಎಂ ಕೃಷ್ಣ ಮತ್ತು ಸರೋಜಾದೇವಿ ಅವರ ನಡುವೆ ಪ್ರೇಮಾಂಕುರವಾಗಿತ್ತು, ಈ ವಿಷಯ ಮದುವೆವರೆಗೂ ಬಂದು ನಂತರ ಮುರಿದು ಬಿದ್ದಿದ್ದು ಇತಿಹಾಸ.
ಎಸ್. ಎಂ. ಕೃಷ್ಣ ಕುಟುಂಬ ಹಾಗೂ ಬಿ.ಸರೋಜಾದೇವಿ ಕುಟುಂಬಗಳ ನಡುವೆ ಪ್ರಾಥಮಿಕ ಮಾತುಕತೆ ನಡೆದಿದೆ. ಆದರೆ, ಇಬ್ಬರ ವಿವಾಹಕ್ಕೆ 2 ಕುಟುಂಬಗಳಲ್ಲಿ ಅಂತಿಮ ಒಪ್ಪಿಗೆ ಸಿಗಲಿಲ್ಲ. ಜೊತೆಗೆ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಬಿ.ಸರೋಜಾದೇವಿ ಅವರನ್ನು ತಮ್ಮ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳಲು ಎಸ್.ಎಂ.ಕೃಷ್ಣ ಕುಟುಂಬದ ಹಿರಿಯರು ಕೂಡ ಒಲವು ತೋರಲಿಲ್ಲ. ಹೀಗಾಗಿ ಬಿ.ಸರೋಜಾ ದೇವಿ ಹಾಗೂ ಎಸ್.ಎಂ.ಕೃಷ್ಣ ನಡುವೆ ವಿವಾಹ ಸಂಬಂಧ ಏರ್ಪಡಲಿಲ್ಲ ಎಂದು ಎಸ್.ಎಂ.ಕೃಷ್ಣ ಸೋದರ ಎಸ್. ಎಂ. ಶಂಕರ್ ಹಿಂದೆ ಹೇಳಿದ್ದರು.
ರಾಜಕಾರಣಿ ಹಾಗೂ ಬರಹಗಾರ ಎಚ್.ವಿಶ್ವನಾಥ್ ಅವರು, ಅವರ ಆತ್ಮಕಥನ "ಹಳ್ಳಿ ಹಕ್ಕಿಯ ಹಾಡು" ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಎಸ್.ಎಂ ಕೃಷ್ಣ ಹಾಗೂ ಬಿ. ಸರೋಜಾ ದೇವಿ ಅವರ ಪ್ರೇಮ ಪ್ರಸಂಗದ ಬಗ್ಗೆ ವಿಶ್ವನಾಥ್ ಅವರು ಉಲ್ಲೇಖಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸರೋಜಾ ದೇವಿ ಅವರು ಈ ವಿಷಯವನ್ನು ಪ್ರಸ್ತಾಪಿಸದ್ದಕ್ಕೆ ತುಸು ಗರಂ ಆಗಿದ್ದರು.
ಇನ್ನೂ ಹಳ್ಳಿ ಹಕ್ಕಿ ಹಾಡು ಪುಸ್ತಕದ ಬಗ್ಗೆ ವಿವಾದ ಎದ್ದಾಗ, ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದರು. ಆಗ ಎಸ್.ಎಂ.ಕೃಷ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಆಗ ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಅವರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಪ್ರೇಮಾ ಕೃಷ್ಣ ಅವರು ನೀಡಿದ್ದ ಸ್ಪಷ್ಟನೆಯಲ್ಲಿ ಬಿ.ಸರೋಜಾದೇವಿ ಅವರನ್ನು ಎಸ್.ಎಂ.ಕೃಷ್ಣ ಅವರ ಜೊತೆ ಮದುವೆ ಮಾಡುವ ಪ್ರಸ್ತಾಪ ಬಂದಿತ್ತು. ಆದರೆ, ಎಸ್.ಎಂ.ಕೃಷ್ಣ ಮನೆಯಲ್ಲಿ ಸಿನಿಮಾ ಹಿನ್ನಲೆಯವರನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಹಿರಿಯರು ಒಪ್ಪಲಿಲ್ಲ. ಅಲ್ಲಿಗೆ ಈ ವಿಷಯ ಮುಗಿಯಿತು. ನಂತರ ಮುಂದುವರಿಯಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಈ ಇಬ್ಬರೂ ತಮ್ಮ ಜೀವನದಲ್ಲಿ ಈ ಪ್ರಸಂಗವನ್ನು ಸಾಮಾಜಿಕವಾಗಿ ದೊಡ್ಡದಾಗಿ ಚರ್ಚಿಸಲಿಲ್ಲ. ಕೃಷ್ಣ ಅವರು ತಮ್ಮ ಪತ್ನಿ ಪ್ರೇಮಾ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದರು, ಸರೋಜಾದೇವಿ 1967ರಲ್ಲಿ ಶ್ರೀಹರ್ಷ ಎಂಬ ಎಂಜಿನಿಯರ್ ರನ್ನು ಮದುವೆಯಾಗಿ ತುಂಬು ಜೀವನ ನಡೆಸಿದ್ದರು.
Advertisement