
ಮೇಘಾಲಯಕ್ಕೆ ಹನಿಮೂನ್ ಹೋಗಿದ್ದಾಗ ಪತ್ನಿಯಿಂದ ಹತ್ಯೆಗೀಡಾದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಕುಟುಂಬ ಸದಸ್ಯರು, ಪತ್ನಿ ಸೋನಮ್ ಮತ್ತು ಆಕೆಯ ಶಂಕಿತ ಪ್ರೇಮಿಯ ಬಂಧನದ ನಂತರ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಅಪರಾಧ ಕೃತ್ಯದ ಕುರಿತ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದಾರೆ.
ಎಸ್‌ಪಿ ನಿಂಬವತ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ "ಹನಿಮೂನ್ ಇನ್ ಶಿಲ್ಲಾಂಗ್" ಎಂದು ಹೆಸರಿಡಲಾಗಿದೆ.
"ಕೊಲೆ ಪ್ರಕರಣದ ಕುರಿತು ಸಿನಿಮಾಗೆ ನಾವು ಒಪ್ಪಿಗೆ ನೀಡಿದ್ದೇವೆ. ನನ್ನ ಸಹೋದರನ ಕೊಲೆಯ ಕಥೆಯನ್ನು ದೊಡ್ಡ ಪರದೆಯ ಮೇಲೆ ತರದಿದ್ದರೆ, ಯಾರು ಸರಿ ಮತ್ತು ಯಾರು ತಪ್ಪು ಎಂದು ಜನರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ ಎಂದು ನಾವು ನಂಬಿದ್ದೇವೆ" ಎಂದು ರಘುವಂಶಿ ಅವರ ಹಿರಿಯ ಸಹೋದರ ಸಚಿನ್ ವರದಿಗಾರರಿಗೆ ತಿಳಿಸಿದ್ದಾರೆ.
ರಾಜಾ ರಘುವಂಶಿಗೆ ದೊಡ್ಡ ದ್ರೋಹ ಮಾಡಲಾಗಿದೆ. ನಮ್ಮ ಚಿತ್ರದ ಮೂಲಕ, ಅಂತಹ ದ್ರೋಹದ ಘಟನೆಗಳನ್ನು ನಿಲ್ಲಿಸಬೇಕು ಎಂಬ ಸಂದೇಶವನ್ನು ನಾವು ಸಾರ್ವಜನಿಕರಿಗೆ ನೀಡಲು ಬಯಸುತ್ತೇವೆ" ಎಂದು ನಿರ್ದೇಶಕ ನಿಂಬವತ್ ಹೇಳಿದ್ದಾರೆ.
ನಟರ ಹೆಸರುಗಳನ್ನು ಬಹಿರಂಗಪಡಿಸದೆ, ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ ಎಂದು ನಿಂಬವತ್ ತಿಳಿಸಿದರು.
"ಚಿತ್ರದ ಚಿತ್ರೀಕರಣವೂ ಶೇ 80 ರಷ್ಟು ಇಂದೋರ್‌ನಲ್ಲಿ ಮತ್ತು ಉಳಿದ ಶೇ. 20 ರಷ್ಟು ಮೇಘಾಲಯದ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ" ಎಂದು ಅವರು ಹೇಳಿದರು.
Advertisement