'ಕಾಂತಾರ: ಚಾಪ್ಟರ್ 1' ಶೂಟಿಂಗ್ ವೇಳೆ ಸಾಲು ಸಾಲು ಅವಘಡಗಳು; ಚಿತ್ರತಂಡಕ್ಕೆ ಸಂಕಷ್ಟ, ನೊಟೀಸ್!
ಶಿವಮೊಗ್ಗ: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ-1' ಚಿತ್ರತಂಡಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. 2 ದಿನಗಳ ಹಿಂದೆ ಸಹ ಕಲಾವಿದ ವಿಜು ವಿಕೆ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಇದೀಗ ಚಿತ್ರೀಕರಣದ ವೇಳೆ ದೋಣಿ ಮಗುಚಿ ಬಿದ್ದ ಘಟನೆ ನಡೆದಿದೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ 'ಕಾಂತಾರ'-1 ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಶನಿವಾರ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಿಷಬ್ ಶೆಟ್ಟಿ ಸೇರಿ 30 ಜನ ಕಲಾವಿದರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಕಲಾವಿದರು, ತಂತ್ರಜ್ಞರು ಎಲ್ಲರೂ ಈಜಿ ದಡ ಸೇರಿದ್ದಾರೆ. ಬೋಟ್‌ನಲ್ಲಿದ್ದವರು ಬಚಾವಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದ್ದು, ಒಂದರ ಹಿಂದೆ ಒಂದರಂತೆ ಘಟನೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಭಯಭೀತಗೊಂಡಿದೆ ಎನ್ನಲಾಗಿದೆ. ಈ ಹಿಂದೆ ರಿಷಬ್ ಶೆಟ್ಟಿಗೆ ಮಂಗಳೂರಿನ ಕದ್ರಿ ಬಾರೆಬೈಲ್ ಪಂಜುರ್ಲಿ ದೈವ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಮತ್ತಷ್ಟು ಅವಘಡಗಳ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನು 'ಕಾಂತಾರ: ಚಾಪ್ಟರ್ 1ಟ ಶೂಟಿಂಗ್ ವೇಳೆ ಸಾಲು ಸಾಲು ಅವಘಡಗಳು ಸಂಭವಿಸುತ್ತಿರುವುದರಿಂದ ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಚಿತ್ರತಂಡಕ್ಕೆ ನೊಟೀಸ್ ನೀಡಲು ಮುಂದಾಗಿದೆ. ಚಿತ್ರತಂಡ, ಶೂಟಿಂಗ್ಗೆ ಎಲ್ಲ ರೀತಿಯ ಪರವಾನಗಿಗಳನ್ನು ತೆಗೆದುಕೊಂಡಿದೆಯೇ, ಚಿತ್ರೀಕರಣದ ವೇಳೆ ಅಗತ್ಯ ಭದ್ರತಾ ಎಚ್ಚರಿಕೆಗಳನ್ನು ವಹಿಸಿದೆಯೇ ಎಂದು ಪರೀಕ್ಷಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ