
ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅಖಿಲಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನಕ್ಕಾಗಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
3 ವರ್ಷಗಳ ಹಿಂದೆ ಅಮೆರಿಕ ನಿವಾಸಿ ಧನಂಜಯ್ ಶರ್ಮ ಜೊತೆ ಅಖಿಲಾ ಪಜಿಮಣ್ಣು ವಿವಾಹ ನೆರವೇರಿತ್ತು. ಆದರೆ ಅವರ ಸಂಸಾರದಲ್ಲಿ ಸಾಮರಸ್ಯ ಮಾಯವಾಗಿದೆ. ಧನಂಜಯ್ ಶರ್ಮಾ ಮತ್ತು ಅಖಿಲಾ ಪಜಿಮಣ್ಣು ಅವರು ಬೇರಾಗಲು ನಿರ್ಧರಿಸಿದ್ದಾರೆ.
ಅಖಿಲಾ ಅವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನವರು. ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಅವರು ಖ್ಯಾತಿ ಗಳಿಸಿದ್ದಾರೆ. ಸುಮಧುರ ಗಾಯನದ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅವರು ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.
ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಪತಿ ಟಿ.ಆರ್ ಧನರಾಜ್ ಶರ್ಮಾ ಪರಸ್ಪರ ಒಪ್ಪಿ ಇದೇ ಜೂನ್ 12 ರಂದು ಪುತ್ತೂರು ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರಿನ ವಕೀಲ ಮಹೇಶ್ ಕಜೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮಾ ನಡುವೆ ಮಧ್ಯಸ್ಥಿಕೆಗೆ ಕಳೆದ ಆರು ತಿಂಗಳಿಂದ ಕೋರ್ಟ್ ಅವಕಾಶ ನೀಡಿತ್ತು. ಬುಧವಾರ (ಜೂನ್ 18) ಈ ದಂಪತಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮ್ಯೂಚುಯಲ್ ಡಿವೋರ್ಸ್ ಪಡೆಯಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಧನಂಜಯ್ ಶರ್ಮ ಅವರು ಪುತ್ತೂರಿನ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಿ ವಾಪಸ್ ತೆರಳಿದ್ದಾರೆ. ಸದ್ಯದಲ್ಲೇ ಅವರು ಅಮೆರಿಕಕ್ಕೆ ಹೋಗಲಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಈ ದಂಪತಿಯ ವಿಚ್ಛೇದನ ಅರ್ಜಿಯ ವಿಚಾರಣೆ ಮುಗಿದಿದೆ. ನ್ಯಾಯಾಲಯವು ಶುಕ್ರವಾರಕ್ಕೆ (ಜೂನ್ 19) ತೀರ್ಪು ಕಾಯ್ದಿರಿಸಿದೆ. ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದ ಅಖಿಲಾ ಮತ್ತು ಧನಂಜಯ್ ಅವರು ಈಗ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಇಬ್ಬರೂ ನಿರ್ಧರಿಸಿದ್ದಾರೆ. ಸದ್ಯ ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.
Advertisement