
ಬೆಂಗಳೂರು: ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧವನ್ನು ಫಿಲ್ಮ್ ಚೇಂಬರ್ ತೆರವು ಮಾಡಿದೆ.
ಇತ್ತೀಚೆಗೆ ಸಾಕಷ್ಟು ವಿವಾದ ಮಾಡಿಕೊಂಡಿದ್ದ ಮಡೆನೂರು ಮನು ಅವರದ್ದು ಎನ್ನಲಾದ ವೈರಲ್ ಆದ ಆಡಿಯೋದಲ್ಲಿ ನಟರಾದ ಶಿವರಾಜ್ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಮನು ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.
ಮಡೆನೂರು ಮನು ಅವರುನಟರಾದ ಶಿವರಾಜ್ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಅವರಿಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದು, ಆ ಪತ್ರವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರಿಗೆ ನೀಡಿದ್ದಾರೆ.
ಮಡೆನೂರು ಮನು ಪತ್ರ ಸ್ವೀಕರಿಸಿದ ಉಮೇಶ್ ಬಣಕಾರ್ ಅವರು, ಈಗಾಗಲೇ ಮನು ಬಹಿರಂಗವಾಗಿ ಮೂವರು ನಟರ ಬಳಿ ಕ್ಷಮೆ ಕೇಳಿದ್ದಾರೆ. ಹೀಗಾಗಿ ಅವರಿಗೆ ಒಂದು ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ನಟನಾಗಿ ಕನ್ನಡ ಚಿತ್ರರಂಗದ ಹೆಸರು ಕಾಪಾಡಲಿ ಎಂದು ಮನುಗೆ ಉಮೇಶ್ ಬಣಕಾರ್ ಬುದ್ಧಿವಾದ ಹೇಳಿದ್ದಾರೆ.
ಮನು ಇತ್ತೀಚಿಗೆ ಕ್ಷಮೆ ಕೇಳಲು ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿದ್ದರು. ಆದರೆ ಶಿವಣ್ಣನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಬಳಿಕ ನಿರಾಸೆಯಿಂದ ವಿಡಿಯೋ ಮೂಲಕ ಶಿವಣ್ಣನಿಗೆ ಮನು ಕ್ಷಮೆ ಕೇಳಿದ್ದರು. ಇದೀಗ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಮನು ಭೇಟಿ ಆಗಿದ್ದಾರೆ. ಮೂವರೂ ನಟರಿಗೆ ಕ್ಷಮೆ ಕೋರಿ ಮನು ಪತ್ರ ಸಲ್ಲಿಸಿದ್ದಾರೆ.
Advertisement