ನಿತಿನ್ ನಟನೆಯ ತೆಲುಗಿನ 'ರಾಬಿನ್‌ಹುಡ್' ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪಾತ್ರ!
ಚೆನ್ನೈ: ನಿರ್ದೇಶಕ ವೆಂಕಿ ಕುಡುಮುಲ ಅವರ ಮುಂಬರುವ ತೆಲುಗು ಆಕ್ಷನ್ ಎಂಟರ್‌ಟೈನರ್ 'ರಾಬಿನ್‌ಹುಡ್'ನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಿತಿನ್ ನಾಯಕನಾಗಿ ನಟಿಸಿದ್ದಾರೆ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ವೈ ರವಿಶಂಕರ್ ಬಹಿರಂಗಪಡಿಸಿದ್ದಾರೆ.
ಭಾರತೀಯ ಕ್ರಿಕೆಟಿಗರಾದ ಶಿಖರ್ ಧವನ್ (Double XL), ಶ್ರೀಶಾಂತ್ (Askar 2), ಹರ್ಭಜನ್ ಸಿಂಗ್ (Mujhse Shaadi Karoge), ಇರ್ಫಾನ್ ಪಠಾಣ್ (Cobra) ಮತ್ತು ಅಜಯ್ ಜಡೇಜಾ (ಖೇಲ್) ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಇದೀಗ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ತೆಲುಗು ಚಿತ್ರದಲ್ಲಿ ತೆರೆಯ ಮೇಲೆ ಪದಾರ್ಪಣೆ ಮಾಡುತ್ತಿದ್ದಾರೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಜನಪ್ರಿಯವಾಗಿರುವ ಡೇವಿಡ್ ವಾರ್ನರ್ ಅವರು ಸನ್‌ರೈಸರ್ಸ್ ಹೈದರಾಬಾದ್ ಪ್ರಾಂಚೈಸಿಯೊಂದಿಗೆ ಇದ್ದ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೊ ಮತ್ತು ಪುಷ್ಪ ಚಿತ್ರದ ಹಾಡುಗಳಿಗೆ ನೃತ್ಯ ಮಾಡಿರುವ ಅವರ ಇನ್‌ಸ್ಟಾಗ್ರಾಂ ರೀಲ್‌ಗಳು ವೈರಲ್ ಆಗಿದ್ದವು.
ಇನ್‌ಸ್ಟಾಗ್ರಾಂನಲ್ಲಿ ನಟ ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಅವರನ್ನು ಫಾಲೋ ಮಾಡಿದ ನಂತರ ವಾರ್ನರ್ ಅವರು ಚಿತ್ರದಲ್ಲಿ ನಟಿಸುವ ಕುರಿತು ವದಂತಿಗಳು ಹರಡಿದ್ದವು. 2024ರ ಸೆಪ್ಟೆಂಬರ್‌ನಲ್ಲಿ ಚಿತ್ರವು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ವಾರ್ನರ್ ತಮ್ಮ ಅತಿಥಿ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿತ್ತು.
ಇದೀಗ ವಾರ್ನರ್ ರಾಬಿನ್‌ಹುಡ್ ಚಿತ್ರದಲ್ಲಿ ನಟಿಸುತ್ತಿರುವುದು ಅಧಿಕೃತವಾಗಿ ಘೋಷಣೆಯಾಗಿದೆ. ವೆಂಕಿ ಕುಡುಮುಲ ನಿರ್ದೇಶನದ ನಿತಿನ್ ಮತ್ತು ಶ್ರೀಲೀಲಾ ಅಭಿನಯದ ರಾಬಿನ್‌ಹುಡ್ ಚಿತ್ರದಲ್ಲಿ ಡೇವಿಡ್ ವಾರ್ನರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಿಂಗ್‌ಸ್ಟನ್‌ನ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪುಷ್ಪ ಸಿನಿಮಾದ ಬ್ಯಾನರ್ ಮೈತ್ರಿ ಮೂವೀ ಮೇಕರ್ಸ್‌ನ ನಿರ್ಮಾಪಕ ರವಿಶಂಕರ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
'ಡೇವಿಡ್ ವಾರ್ನರ್ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದು ರೋಮಾಂಚನಕಾರಿಯಾಗಿದೆ' ಎಂದು ತಿಳಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ