
ನವದೆಹಲಿ: ಬಿರುದುಗಳು ಮತ್ತು ಪುರಸ್ಕಾರಗಳು ಬೆಲೆಕಟ್ಟಲು ಸಾಧ್ಯವಾಗದಂತವುಗಳು. ಆದರೆ, ಅವು ಕೆಲವೊಮ್ಮೆ ನಟರನ್ನು ತಮ್ಮ ಕಲೆಯಿಂದ ದೂರವಿಡುವಂತೆಯೂ ಮಾಡುತ್ತವೆ ಎಂದಿರುವ ನಟಿ ನಯನತಾರಾ, ತನಗೆ ನೀಡಲಾಗಿರುವ 'ಲೇಡಿ ಸೂಪರ್‌ಸ್ಟಾರ್' ಎಂಬ ಬಿರುದನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
'ಶ್ರೀರಾಮ ರಾಜ್ಯ', 'ಅನಾಮಿಕ', 'ಚಂದ್ರಮುಖಿ', 'ಗಜಿನಿ' ಮತ್ತು 'ಜವಾನ್' ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಯನತಾರಾ ಮಂಗಳವಾರ ಅಭಿಮಾನಿಗಳು, ಮಾಧ್ಯಮಗಳು ಮತ್ತು ಸಿನಿಮಾ ಸಹೋದ್ಯೋಗಿಗಳನ್ನು ಉದ್ದೇಶಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ನಿಮ್ಮಲ್ಲಿ ಅನೇಕರು ನನ್ನನ್ನು 'ಲೇಡಿ ಸೂಪರ್‌ಸ್ಟಾರ್' ಎಂದು ಪ್ರೀತಿಯಿಂದ ಕರೆಯುತ್ತಿದ್ದೀರಿ. ಇದು ನಿಮ್ಮ ಅಪಾರ ಪ್ರೀತಿಯಿಂದ ಹುಟ್ಟಿದ ಬಿರುದಾಗಿದೆ. ಅಂತಹ ಅಮೂಲ್ಯವಾದ ಬಿರುದನ್ನು ನನಗೆ ಕೊಟ್ಟಿದ್ದಕ್ಕಾಗಿ ನಾನು ನಿಮಗೆ ತುಂಬಾ ಋಣಿಯಾಗಿದ್ದೇನೆ. ಆದರೂ, ಲೇಡಿ ಸೂಪರ್‌ಸ್ಟಾರ್ ಎಂದು ಕರೆಯುವ ಬದಲು ನನ್ನನ್ನು 'ನಯನತಾರಾ' ಎಂದು ಕರೆಯಲು ನಾನು ವಿನಮ್ರವಾಗಿ ವಿನಂತಿಸುತ್ತೇನೆ' ಎಂದಿದ್ದಾರೆ.
'ಈ ಹೆಸರು ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಓರ್ವ ನಟಿಯಾಗಿ ಮಾತ್ರವಲ್ಲದೆ ಓರ್ವ ವ್ಯಕ್ತಿಯಾಗಿಯೂ ನಾನು ಯಾರೆಂಬುದನ್ನು ಪ್ರತಿನಿಧಿಸುತ್ತದೆ. ಬಿರುದುಗಳು ಮತ್ತು ಪುರಸ್ಕಾರಗಳು ಅಮೂಲ್ಯವಾದವುಗಳು. ಆದರೆ, ಅವು ಕೆಲವೊಮ್ಮೆ ನಮ್ಮ ಕೆಲಸ, ನಮ್ಮ ಕಲೆ ಮತ್ತು ನಾವು ನಿಮ್ಮೊಂದಿಗೆ ಹಂಚಿಕೊಳ್ಳುವ ಬೇಷರತ್ತಾದ ಬಂಧದಿಂದ ನಮ್ಮನ್ನು ಪ್ರತ್ಯೇಕಿಸುವ ಇಮೇಜ್ ಅನ್ನು ಸೃಷ್ಟಿಸಬಹುದು' ಎಂದು ಅವರು ಬರೆದಿದ್ದಾರೆ.
ಇತ್ತೀಚೆಗಷ್ಟೇ ಕಮಲ್ ಹಾಸನ್, ಅಜಿತ್ ಮತ್ತು ಜಯಂ ರವಿ ಅವರು ಅಭಿಮಾನಿಗಳು ತಮಗೆ ನೀಡಿದ್ದ ಬಿರುದುಗಳನ್ನು ಬಿಟ್ಟಿದ್ದರು. ಇದೀಗ ನಟಿ ನಯನತಾರಾ ಕೂಡ ಆ ಸಾಲಿಗೆ ಸೇರಿದ್ದಾರೆ.
ನಟಿಯ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್ ಮತ್ತು ಅವರ ಮೊದಲ ಚಿತ್ರ 'ಮನಸ್ಸಿನಕ್ಕರೆ' (2003). ನಿರ್ದೇಶಕ ಸತ್ಯನ್ ಅಂತಿಕಾಡ್ ಅವರು ನಟಿಗೆ 'ನಯನತಾರಾ' ಎಂಬ ತೆರೆಮೇಲಿನ ಹೆಸರನ್ನು ನೀಡಿದರು.
40 ವರ್ಷದ ನಯನತಾರಾ, ''ಪ್ರೀತಿಯ ಭಾಷೆ' ಎಲ್ಲ ಮಿತಿಗಳನ್ನು ಮೀರಿ ಜನರನ್ನು ಸಂಪರ್ಕಿಸುತ್ತದೆ. ನಮ್ಮೆಲ್ಲರಿಗೂ ಭವಿಷ್ಯವು ಅನಿರೀಕ್ಷಿತವಾಗಿದ್ದರೂ, ನಿಮ್ಮ ಬೆಂಬಲ ನಿರಂತರವಾಗಿರುತ್ತದೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಹಾಗೆಯೇ ನಿಮ್ಮನ್ನು ರಂಜಿಸಲು ನನ್ನ ಶ್ರಮವೂ ಇರುತ್ತದೆ. ಸಿನಿಮಾ ನಮ್ಮನ್ನು ಒಗ್ಗೂಡಿಸುತ್ತದೆ ಮತ್ತು ಅದನ್ನು ಒಟ್ಟಿಗೆ ಆಚರಿಸೋಣ. ಪ್ರೀತಿ, ಗೌರವ ಮತ್ತು ಕೃತಜ್ಞತೆಯಿಂದ, ನಯನತಾರಾ,' ಎಂದು ಬರೆದಿದ್ದಾರೆ.
'ನಯನತಾರಾ ಯಾವಾಗಲೂ ಮತ್ತು ನಯನತಾರಾ' ಎಂದು ಶೀರ್ಷಿಕೆ ನೀಡಿದ್ದಾರೆ.
Advertisement