
ಚೆನ್ನೈ: ನಟಿ ನಯನತಾರಾ ನಾಯಕಿಯಾಗಿ ನಟಿಸಿರುವ, ಸುಂದರ್ ಸಿ ನಿರ್ದೇಶನದ ಮುಂಬರುವ 'ಮೂಕುತಿ ಅಮ್ಮನ್ 2' ಚಿತ್ರದ ಮೂಲಕ ಕನ್ನಡದ ನಟ ದುನಿಯಾ ವಿಜಯ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟ ರಜನಿಕಾಂತ್ 'ಅರುಣಾಚಲಂ' ಚಿತ್ರವನ್ನು ನಿರ್ದೇಶಿಸಿದ ಅದೇ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ಪದಗಳಿಗೆ ಮೀರಿದಷ್ಟು ರೋಮಾಂಚನವನ್ನುಂಟುಮಾಡಿದೆ ಎಂದು ನಟ ಹೇಳಿದ್ದಾರೆ.
ಐಎಎನ್‌ಎಸ್ ಜೊತೆ ಮಾತನಾಡಿದ ದುನಿಯಾ ವಿಜಯ್, 'ಇದು ನನಗೆ ತುಂಬಾ ಭಾವನಾತ್ಮಕ ಕ್ಷಣ. ಅವರು (ನಿರ್ದೇಶಕ ಸುಂದರ್ ಸಿ) ವೇದಿಕೆ ಮೇಲೆ ನನ್ನ ಬಗ್ಗೆ ಮಾತನಾಡಿದರು. ನಾನು ನಿರ್ದೇಶಕ ಸುಂದರ್ ಸಿ ಅವರನ್ನು ಪ್ರೀತಿಸುತ್ತೇನೆ. ಅವರು, ಚಿತ್ರತಂಡ ಮತ್ತು ತಮಿಳುನಾಡಿನ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.
ದುನಿಯಾ ವಿಜಯ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ನಾನು ರಜನಿಕಾಂತ್ ಸರ್ ಅವರ ದೊಡ್ಡ ಅಭಿಮಾನಿ. ಅವರನ್ನು ಭೇಟಿಯಾಗಬೇಕೆಂದು ಬಯಸಿ 30 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ. ನಾನು 15 ದಿನಗಳ ಕಾಲ ಅಲ್ಲೇ ಇದ್ದೆ ಆದರೆ, ಆಗ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಂತರ ನಾನು ಕರ್ನಾಟಕಕ್ಕೆ ಹಿಂತಿರುಗಿ ಅಲ್ಲಿ ನಟನಾದೆ. ಕೆಲವು ವರ್ಷಗಳ ನಂತರ, ನಾನು ರಜನಿಕಾಂತ್ ಸರ್ ಅವರನ್ನು ಭೇಟಿಯಾದೆ. ಅವರು ನನ್ನ ಚಿತ್ರಗಳನ್ನು ನೋಡಿದ್ದರು ಮತ್ತು ಮೆಚ್ಚುಗೆ ಸೂಚಿಸಿದ್ದರು' ಎಂದು ಹೇಳಿದರು.
'ನನಗೆ ಸುಂದರ್ ಸಿ ಸರ್ ಅಂದ್ರೆ ತುಂಬಾ ಇಷ್ಟ. 26 ವರ್ಷಗಳ ಹಿಂದೆ ಅವರು ನಿರ್ದೇಶಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ ಅರುಣಾಚಲಂ ಸಿನಿಮಾ ಮಾಡಿದಾಗ ನಾನು ಅವರ ಅಭಿಮಾನಿ ಆದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನಿರ್ದೇಶಿಸಿದ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ' ಎಂದರು.
ಕನಿಷ್ಠ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ಈ ತಿಂಗಳ ಮಧ್ಯಭಾಗದಿಂದ ನಾನು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತೇನೆ. ಮುಂದಿನ ತಿಂಗಳು ಈ ಚಿತ್ರಕ್ಕಾಗಿ ನಾನು ಮತ್ತೆ ಇಲ್ಲಿಗೆ ಬರುತ್ತೇನೆ. ಈ ಚಿತ್ರದಲ್ಲಿನ ನನ್ನ ಪಾತ್ರಕ್ಕಾಗಿ ನಾನು ಸುಮಾರು 40 ದಿನಗಳ ಕಾಲ ಚಿತ್ರೀಕರಣ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಕನಿಷ್ಠ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಯನತಾರಾ ಮತ್ತು ದುನಿಯಾ ವಿಜಯ್ ಹೊರತುಪಡಿಸಿ, ನಟಿಯರಾದ ಊರ್ವಶಿ, ರೆಜಿನಾ ಕ್ಯಾಸಂದ್ರ, ಯೋಗಿ ಬಾಬು, ಸಿಂಗಮ್ ಪುಲಿ, ಗೋಪಿ ಅಮರನಾಥ್, ಅಭಿನಯ, ಇನಿಯಾ, ಮೈನಾ ನಂದಿನಿ, ಸ್ವಾಮಿನಾಥನ್ ಮತ್ತು ಅಜಯ್ ಘೋಷ್ ನಟಿಸಲಿದ್ದಾರೆ. ಚಿತ್ರಕ್ಕೆ ಹಿಪ್ ಹಾಪ್ ತಮಿಝಾ ಅವರ ಸಂಗೀತ ಸಂಯೋಜನೆಯಿದೆ.
Advertisement