
ನಟ, ಚಲನಚಿತ್ರ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲ ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ(BIFFes) ಸುತ್ತಲಿನ ವಿವಾದದ ಕೇಂದ್ರಬಿಂದುವಾಗಿದ್ದರು. ಈ ಕಾರ್ಯಕ್ರಮವು ಪ್ರಶಂಸೆ ಮತ್ತು ಟೀಕೆ ಎರಡನ್ನೂ ಪಡೆಯಿತು. ಅವ್ಯವಸ್ಥೆ, ಚಿತ್ರೋದ್ಯಮದ ಕಡಿಮೆ ಹಾಜರಾತಿ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಸಾರ್ವಜನಿಕ ಟೀಕೆಗಳನ್ನು ಎದುರಿಸಬೇಕಾಯಿತು.
ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರು, ಈ ವಿವಾದದಿಂದ ಸಿನಿಮಾ ಮೇಲಿನ ತಮ್ಮ ಪ್ರೀತಿ ಕಮ್ಮಿ ಆಗಿಲ್ಲ. "ಸಿನಿಮಾದಲ್ಲಿ ನಟಿಸುವುದು ಸಂತೋಷವನ್ನು ತರುತ್ತದೆ. ಸಿನಿಮಾದ ಮೇಲಿನ ಉತ್ಸಾಹವು ಕಾರ್ಯಕ್ರಮವನ್ನು ಆಯೋಜಿಸುವ ಸವಾಲುಗಳಿಗಿಂತ ಭಿನ್ನವಾಗಿದೆ" ಎಂದು ಹೇಳಿದ್ದಾರೆ
"ನೀವು ಒಂದು ಹೆಜ್ಜೆ ಮುಂದೆ ಇಟ್ಟು ಏನೇ ಮಾಡಿದರೂ ಅಡೆತಡೆಗಳು ಇದ್ದೇ ಇರುತ್ತವೆ." ಕರ್ನಾಟಕ ಚಲನಚಿತ್ರ ಅಕಾಡೆಮಿಯ(KCA) ಅಧ್ಯಕ್ಷನಾಗಿ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿ ಆಡಳಿತಾತ್ಮಕವಾಗಿತ್ತು ಮತ್ತು ಈ ಕಾರ್ಯಕ್ರಮ ಸರ್ಕಾರಿ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿತ್ತು ಎಂದು ವಿವರಿಸಿದ್ದಾರೆ.
"BIFFes ಸರ್ಕಾರಿ ನೇತೃತ್ವದ ಕಾರ್ಯಕ್ರಮವಾಗಿದ್ದು, ಅಕಾಡೆಮಿಯ ಮೂಲಕ ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಯಾವುದೇ ರಾಜಕೀಯ ಪಕ್ಷವು ಅಧಿಕಾರದಲ್ಲಿದ್ದರೂ, ಬೈಲಾ ಪ್ರಕಾರ ಕಾರ್ಯಕ್ರಮ ನಡೆಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮಾತ್ರ ನನ್ನ ಕೆಲಸವಾಗಿತ್ತು" ಎಂದು ಸಾಧು ಸ್ಪಷ್ಪಪಡಿಸಿದ್ದಾರೆ.
ಕೆಲವು ವಿಮರ್ಶಕರು ಕನ್ನಡ ಚಿತ್ರಗಳ ಮೇಲೆ ಮಾತ್ರ ಗಮನ ಹರಿಸಬೇಕೆಂದು ಹೇಳಿದ್ದರೂ, ಬಿಐಎಫ್‌ಎಫ್, ಜಾಗತಿಕ ಸಿನಿಮಾ ಮತ್ತು ತಾಂತ್ರಿಕ ಜ್ಞಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಎತ್ತಿ ತೋರಿಸಿದ್ದಾರೆ.
"2025 ರಲ್ಲಿ ಕೇವಲ ಎರಡು ತಿಂಗಳಲ್ಲಿ 55 ಕ್ಕೂ ಹೆಚ್ಚು ಚಲನಚಿತ್ರಗಳು ಬಿಡುಗಡೆಯಾಗಿವೆ. ಉದ್ಯಮದಲ್ಲಿ ಹಲವು ಕನ್ನಡ ಚಿತ್ರಗಳು ಬರುತ್ತಿವೆ. ಆದರೆ ಗುಣಮಟ್ಟದ ನಿಯಂತ್ರಣವು ಕಳವಳಕಾರಿಯಾಗಿದೆ. ಪ್ರೇಕ್ಷಕರು ಕೇವಲ ಸ್ಟಾರ್ ಆಧಾರಿತ ಚಲನಚಿತ್ರಗಳಲ್ಲ, ವಿಷಯ ಆಧಾರಿತ ಚಲನಚಿತ್ರಗಳನ್ನು ಹುಡುಕುತ್ತಾರೆ" ಎಂದು ಅವರು ವಿವರಿಸಿದ್ದಾರೆ.
ಚಲನಚಿತ್ರೋತ್ಸವದಿಂದ ಆರ್ಥಿಕ ಲಾಭ ಮಾಡಿಕೊಂಡ ಆರೋಪಗಳನ್ನು ನಿರಾಕರಿಸಿದ ಸಾಧು, "ಒಂದು ರೂಪಾಯಿಯೂ ನನಗೆ ನೇರವಾಗಿ ಬರುವುದಿಲ್ಲ. ಪ್ರತಿಯೊಂದು ವೆಚ್ಚವು ಬಹು ಹಂತಗಳ ಮೂಲಕ ಹಾದುಹೋಗುತ್ತದೆ. ಹಣಕಾಸಿನ ದುರುಪಯೋಗಕ್ಕೆ ಯಾವುದೇ ಅವಕಾಶವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಸಾಧು ಕೋಕಿಲ, "ಇದು ವೈಯಕ್ತಿಕ ದಾಳಿಯಲ್ಲ; ಅವರು ತಮ್ಮ ಕಳವಳಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ" ಎಂದರು.
Advertisement