
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ ತಮ್ಮ ಮುಂಬರುವ ಚಿತ್ರ 'ಅಮೆರಿಕಾ ಅಮೆರಿಕಾ 2' ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಶೀರ್ಷಿಕೆಯು ಅವರ 1997ರ ಕಲ್ಟ್ ಕ್ಲಾಸಿಕ್ 'ಅಮೆರಿಕಾ ಅಮೆರಿಕಾ' ಚಿತ್ರವನ್ನು ನೆನಪಿಸುತ್ತದೆ. ನಟಿ ಶಾನ್ವಿ ಶ್ರೀವಾಸ್ತವ, ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬಾರ್ ನಟಿಸಿರುವ ಈ ಚಿತ್ರವು ಹಳೆಯ ಚಿತ್ರಕ್ಕೆ ನೇರ ಸಂಬಂಧ ಹೊಂದಿಲ್ಲದಿದ್ದರೂ, ಮೂಲ ಚಿತ್ರದ ಉತ್ಸಾಹ ಮತ್ತು ವಿಷಯವನ್ನು ಆಧರಿಸಿದೆ.
ನಮ್ಮ ಮೂಲದ ಪ್ರಕಾರ, 'ಅಮೆರಿಕಾ ಅಮೆರಿಕಾ' ಚಿತ್ರದಲ್ಲಿ ನಟಿಸಿದ್ದ ರಮೇಶ್ ಅರವಿಂದ್ ಅವರು ಹೊಸ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಮತ್ತು ಈಗಿನ ಚಿತ್ರದ ನಡುವೆ ನಿರೂಪಣಾ ನಿರೂಪಣಾ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.
1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಮನೋ ಮೂರ್ತಿ ಅವರೇ ಅಮೆರಿಕಾ ಅಮೆರಿಕಾ 2 ಚಿತ್ರಕ್ಕೂ ಸಂಗೀತ ಸಂಯೋಜಿಸಲಿದ್ದಾರೆ.
ಸಹನಾ ವಿಜಯಕುಮಾರ್ ಅವರ 'ಕ್ಷಮೆ' ಕಾದಂಬರಿಯಿಂದ ಸ್ಫೂರ್ತಿ ಪಡೆದ 'ಅಮೆರಿಕಾ ಅಮೆರಿಕಾ 2' ಚಿತ್ರವು ಬೆಂಗಳೂರು ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರೀತಿ, ಹಂಬಲ ಮತ್ತು ಸ್ಥಳಾಂತರದ ಭಾವನಾತ್ಮಕ ವಿಚಾರಗಳನ್ನು ತೆರೆಮೇಲೆ ತರಲಿದೆ. ಚಿತ್ರದಲ್ಲಿ ಮಂಡ್ಯ ರಮೇಶ್, ಮಾನಸಿ ಸುಧೀರ್ ಮತ್ತು ಟೆಂಟ್ ಸಿನಿಮಾ ಪೋಷಿಸಿದ ಉದಯೋನ್ಮುಖ ಪ್ರತಿಭೆಗಳು ಸಹ ಇದ್ದಾರೆ.
ಕೆ ರವೀಂದ್ರ ನಿರ್ಮಿಸಿರುವ ಈ ಚಿತ್ರವು ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದ್ದು, ಸದ್ಯ ರೀ-ರೆಕಾರ್ಡಿಂಗ್ ಹಂತದಲ್ಲಿದೆ. ಈ ಮೊದಲು ಚಿತ್ರಕ್ಕೆ ಅಮರ ಮಧುರ ಪ್ರೇಮ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿತ್ತು.
Advertisement