
ನವದೆಹಲಿ: ಓಂ ರಾವುತ್ ನಿರ್ದೇಶಿಸಲಿರುವ ಜೀವನ ಚರಿತ್ರೆಯಲ್ಲಿ ತಮಿಳು ನಟ ಧನುಷ್ ಮಾಜಿ ರಾಷ್ಟ್ರಪತಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.
'ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂಬ ಶೀರ್ಷಿಕೆಯ ಈ ಚಿತ್ರವನ್ನು ಬುಧವಾರ ಕಾನ್ಸ್ ಫಿಲ್ಮ್ ಮಾರುಕಟ್ಟೆಯಲ್ಲಿ ಘೋಷಣೆ ಮಾಡಲಾಯಿತು.
ಧನುಷ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಮೊದಲ ಪೋಸ್ಟರ್ ಜೊತೆಗೆ ಈ ಘೋಷಣೆಯನ್ನು ಹಂಚಿಕೊಂಡಿದ್ದಾರೆ.
'ನಮ್ಮವರೇ ಆದ ಡಾ. ಎಪಿಜೆ ಅಬ್ದುಲ್ ಕಲಾಂ ಸರ್, ಅವರ ಸ್ಪೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನವನ್ನು ಚಿತ್ರಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನಾನು ನಿಜವಾಗಿಯೂ ಧನ್ಯ ಮತ್ತು ಅತ್ಯಂತ ವಿನಮ್ರನಾಗಿದ್ದೇನೆ' ಎಂದು ಅವರು ಬರೆದಿದ್ದಾರೆ.
'ಕಲಾಂ' ಚಿತ್ರವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್‌ನ ಅಭಿಷೇಕ್ ಅಗರ್ವಾಲ್ ಮತ್ತು ಅನಿಲ್ ಸುಂಕಾರ ನಿರ್ಮಿಸಿದ್ದಾರೆ.
'ತಾನಾಜಿ: ದಿ ಅನ್‌ಸಂಗ್ ವಾರಿಯರ್' ಮತ್ತು 'ಆದಿಪುರುಷ' ಚಿತ್ರಗಳಿಗೆ ಹೆಸರುವಾಸಿಯಾದ ರಾವುತ್, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಚಿತ್ರದ ಕುರಿತು ಮಾಹಿತಿ ಪೋಸ್ಟ್ ಮಾಡಿದ್ದು, 'ರಾಮೇಶ್ವರಂನಿಂದ ರಾಷ್ಟ್ರಪತಿ ಭವನಕ್ಕೆ, ದಂತಕಥೆಯ ಪ್ರಯಾಣ ಪ್ರಾರಂಭವಾಗುತ್ತದೆ. ಭಾರತದ ಮಿಸೈಲ್ ಮ್ಯಾನ್ ಬೆಳ್ಳಿ ಪರದೆಗೆ ಬರುತ್ತಿದೆ. ದೊಡ್ಡ ಕನಸು ಕಾಣಿರಿ. ಎತ್ತರಕ್ಕೆ ಏರಿರಿ. ಕಲಾಂ- ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಅವರು ಬರೆದಿದ್ದಾರೆ.
ಹಿಂದಿನ ಪೋಸ್ಟ್‌ನಲ್ಲಿ ನಿರ್ದೇಶಕರು, 'ಐಕಾನಿಕ್' ಕಾನ್ಸ್ ಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. 'ಜಾಗತಿಕ ವೇದಿಕೆಯಲ್ಲಿ ಸಿನಿಮಾದ ಈ ಆಚರಣೆಯ ಭಾಗವಾಗುವುದು ಹೆಮ್ಮೆಯ ವಿಚಾರ' ಎಂದು ಅವರು ಹೇಳಿದರು.
78ನೇ ಕಾನ್ ಚಿತ್ರೋತ್ಸವ ಶನಿವಾರ ಮುಕ್ತಾಯಗೊಳ್ಳಲಿದೆ.
Advertisement