

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ 'ಬಿಗ್ಬಾಸ್ ಶೋ' ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ವಿವಾದವೂ ಹೆಚ್ಚಾಗುತ್ತಿದೆ.
ಈ ಬಾರಿ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಪೈಕಿ ಅಶ್ವಿನಿ ಗೌಡ ಅವರ ಆಕ್ರಮಣಕಾರಿ ಸ್ವಭಾವ ಕುರಿತು ವೀಕ್ಷಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ರಕ್ಷಿತಾ, ಗಿಲ್ಲಿ, ರಘು ಸೇರಿದಂತೆ ಮತ್ತಿತರ ಸ್ಪರ್ಧಿಗಳೊಂದಿಗೆ ಆಗಾಗ್ಗೆ ಜಗಳ, ಪದ ಬಳಕೆ ಸೇರಿದಂತೆ ಮತ್ತಿತರ ಕಾರಣಗಳನ್ನು ಮುಂದಿಟ್ಟು ಅನೇಕ ವೀಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿಕಾರುತ್ತಿದ್ದಾರೆ.
ಈ ಹಿಂದೆ ರಕ್ಷಿತಾ ಅವರನ್ನು s(ಸ್ಲಂ) ಎಂದಿದ್ದ ಅಶ್ವಿನಿ ಗೌಡ, ಅಮಾವಾಸ್ಯೆ ಅಂತಲೂ ಕರೆಯುವ ಮೂಲಕ ಅವಮಾನಿಸಿದ್ದಾರೆ ಎಂದು ವೀಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಸುದೀಪ್ ವಿರುದ್ಧವೂ ಟೀಕೆ: ಅಲ್ಲದೇ, ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ವಿರುದ್ಧವೂ ಟೀಕೆಗಳು ಕೇಳಿಬರುತ್ತಿವೆ. ವಾರಾಂತ್ಯದಲ್ಲಿ ಬೇರೆ ಎಲ್ಲರಿಗೂ ತಿದ್ದಿ ಬುದ್ದಿವಾದ ಹೇಳುವ ಸುದೀಪ್, ಅಶ್ವಿನಿ ಗೌಡ ವಿಚಾರದಲ್ಲಿ ಮೌನ ವಹಿಸುತ್ತಾರೆ. ವಾರ್ನಿಂಗ್ ನೀಡಲ್ಲ ಎಂದು ಎಷ್ಟೋ ವೀಕ್ಷಕರು ಹೇಳಿಕೊಳ್ಳುತ್ತಿದ್ದಾರೆ.
ರಾಮನಗರ ಡಿವೈಎಸ್ಪಿ ಕಚೇರಿಯಲ್ಲಿ ದೂರು ದಾಖಲು: ಈ ಮಧ್ಯೆ ಇದೀಗ ನಿರೂಪಕ ಕಿಚ್ಚ ಸುದೀಪ್ ಹಾಗೂ ಸ್ಪರ್ಧಿ ಅಶ್ವಿನಿಗೌಡ ವಿರುದ್ಧ ದೂರು ದಾಖಲಾಗಿದೆ. ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅವಮಾನಕಾರಿ ಆಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಆರೋಪದ ಮೇಲೆ ರಾಮನಗರ ಡಿವೈಎಸ್ಪಿ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಎನ್ನುವವರು ದೂರು ದಾಖಲಿಸಿದ್ದಾರೆ.
ರಕ್ಷಿತಾ ವಿರುದ್ಧ ಅಶ್ವಿನಿ ಗೌಡ ಮಾನಹಾನಿಕರ ಪದ ಬಳಕೆ ಮಾಡಿದ್ದಾರೆ. ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ರಕ್ಷಿತಾಗೆ ಬೆದರಿಕೆ ಹಾಕುವ ರೀತಿ ಮಾತನಾಡಿದ್ದಾರೆ. ಇದೆಲ್ಲವನ್ನೂ ಕೂಡಾ ಖಾಸಗಿ ವಾಹಿನಿ ಪ್ರಸಾರ ಮಾಡಿ ರಕ್ಷಿತಾ ಮಾನಹಾನಿಯಾಗುವಂತೆ ಮಾಡಿದೆ. ಅಲ್ಲದೇ ಸ್ಪರ್ಧಿ ರಿಷಾ, ಸಹಸ್ಪರ್ಧಿ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮದ ಮುಖ್ಯಸ್ಥರು ಯಾವುದೇ ಕ್ರಮವಹಿಸಿಲ್ಲ. ಹಾಗಾಗಿ ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಸುದೀಪ್ ಈ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಇತ್ತೀಚೆಗೆ ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದ ಸುದೀಪ್, ‘ಪಿತ್ತ ನೆತ್ತಿಗೆ ಏರುತ್ತದೆ’ ಎಂದು ಹೇಳಿದ್ದರು. ಆ ಮಾತಿಗೆ ಸಂಧ್ಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದೀಪ್ ಈ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ? ಜೊತೆಗೆ ಅಶ್ವಿನಿ ಗೌಡ ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ’ಎಂದು ಸಂಧ್ಯಾ ಹೇಳಿದ್ದಾರೆ. ರಿಷಾ ವಿರುದ್ಧವೂ ದೂರು ನೀಡಲಾಗಿದೆ.
Advertisement