
ಅಕ್ಟೋಬರ್ 11 ರಂದು ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಗ್ ಬಿ ಜೊತೆ ಪರದೆಯನ್ನು ಹಂಚಿಕೊಂಡರು.
25 ವರ್ಷಗಳಿಗೂ ಹೆಚ್ಚು ಕಾಲದಿಂದ ಮನೆಮನೆಗಳಲ್ಲಿ ಜನಪ್ರಿಯವಾಗಿರುವ ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಕಾಂತಾರ: ಚಾಪ್ಟರ್ 1 ಚಿತ್ರದ ಅದ್ಭುತ ಯಶಸ್ಸಿನ ನಂತರ ಅವರ ಜನಪ್ರಿಯತೆಯೂ ದೇಶಾದ್ಯಂತ ಗಗನಕ್ಕೇರಿದೆ. ಈ ಸುದ್ದಿಯನ್ನು ಕಾಂತಾರ ಚಿತ್ರದ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ದೃಢಪಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ.
'ಕಾಂತಾರ: ಚಾಪ್ಟರ್ 1' ತಂಡವು ಭಾರತೀಯ ಚಿತ್ರರಂಗದ ಶಹೆನ್‌ಶಾ, ದಂತಕಥೆ ಅಮಿತಾಬ್ ಬಚ್ಚನ್ ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ' ಎಂದು ಹೊಂಬಾಳೆ ಫಿಲ್ಮ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ. ಕೆಬಿಸಿ ಸೆಟ್‌ನಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ರಿಷಬ್ ಶೆಟ್ಟಿ ಇರುವ ಫೋಟೊವನ್ನು ಹಂಚಿಕೊಂಡಿದೆ.
'ಕೌನ್ ಬನೇಗಾ ಕರೋಡ್‌ಪತಿಯ ಮುಂಬರುವ ಸಂಚಿಕೆಯ ಬಗ್ಗೆ ನಾವು ರೋಮಾಂಚನಗೊಂಡಿದ್ದೇವೆ. ನಿಮ್ಮೊಂದಿಗೆ ಸೇರಲು ತುಂಬಾ ಸಂತೋಷವಾಯಿತು ಸರ್' ಎಂದು ತಿಳಿಸಿದೆ.
ಕಾರ್ಯಕ್ರಮದ ಮುಂಬರುವ ಸಂಚಿಕೆಗಳಲ್ಲಿ ಒಂದರಲ್ಲಿ ಅಮಿತಾಬ್ ಬಚ್ಚನ್ ಎದುರು ರಿಷಬ್ ಶೆಟ್ಟಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಇದು ದೃಢಪಡಿಸುತ್ತದೆ.
ಅಭಿಮಾನಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, 'ರಿಷಭ್ ಕೆಬಿಸಿಯಲ್ಲಿ ಎಷ್ಟು ಗೆಲ್ಲುತ್ತಾರೆ?' ಎಂಬುದು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಪ್ರಶ್ನೆಯಾಗಿದೆ.
ಈ ಸಂಚಿಕೆಯ ಪ್ರಸಾರ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ನಿರೀಕ್ಷೆ ಈಗಾಗಲೇ ಗಗನಕ್ಕೇರಿದೆ. ರಿಷಭ್ ಶೆಟ್ಟಿ ಸದ್ಯ ಕಾಂತಾರ: ಚಾಪ್ಟರ್ 1 ರ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವುದು ಮತ್ತು ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದರಿಂದ, ಈ ಮುಂಬರುವ ಕೌನ್ ಬನೇಗಾ ಕರೋಡ್ ಪತಿ ಸಂಚಿಕೆಯು ಮಹತ್ವ ಪಡೆದಿದೆ.
Advertisement