
ಕನ್ನಡಿಗರ ಕಣ್ಮಣಿ, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನರಾಗಿ ಇದೇ ತಿಂಗಳ 29ಕ್ಕೆ ನಾಲ್ಕು ವರ್ಷಗಳಾಗುತ್ತಿವೆ. ಆದರೆ ಅವರ ನೆನಪುಗಳು ಸದಾ ಜೀವಂತವಾಗಿದೆ. ಅವರ ಅಭಿಮಾನಿಗಳು ತಮ್ಮ ಕೆಲಸ ಕಾರ್ಯಗಳು, ಸಿನಿಮಾಗಳ ಮೂಲಕ ಸ್ಮರಿಸಿಕೊಳ್ಳುತ್ತಿದ್ದಾರೆ.
ಪುನೀರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ನೆನಪಿನಲ್ಲಿ ಅಪ್ಲಿಕೇಶನ್ ಒಂದನ್ನು ಹೊರತರಲು ಸಜ್ಜಾಗಿದ್ದಾರೆ. ಕೆಲ ಉತ್ಸಾಹಿ ತಂಡದೊಂದಿಗೆ ಈಗಾಗಲೇ ಅಪ್ಲಿಕೇಶನ್ ಒಂದನ್ನು ರೂಪಿಸಿದ್ದು ಇಂದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಅದರ ಹೆಸರು ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್.
ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್ಗೆ ‘ಪಿಆರ್‌ಕೆ’ ಎಂದು ಹೆಸರಿಡಲಾಗಿದ್ದು, ಅಕ್ಟೋಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಪುನೀತ್ ಜನ್ಮ, ಬಾಲ್ಯಜೀವನ, ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಈ ಅಪ್ಲಿಕೇಶನ್ ನ್ನು ಬಳಸುವ ಯೋಜನೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಇದೆ.
ಈ ಅಪ್ಲಿಕೇಶನ್ನ ಲೋಕಾರ್ಪಣೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರನ್ನೂ ಸಹ ಆಹ್ವಾನಿಸುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿರುವ ಜೊತೆಗೆ, ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಸಹ ಈ ಅಪ್ಲಿಕೇಶನ್ ಒಳಗೊಂಡಿದೆ.
ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 3 ನಿಮಿಷ 21 ಸೆಕೆಂಡ್ ಗಳ ವಿಡಿಯೋವೊಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕಿಚ್ಚ ಸುದೀಪ್ ವಾಯ್ಸ್ ಓವರ್ ಕೊಟ್ಟಿರೋದು ವಿಶೇಷ.
ಪುನೀತ್ ರಾಜ್ಕುಮಾರ್ ಅವರು ಅಕ್ಟೋಬರ್ 29, 2021 ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನ ಹೊಂದಿದರು. ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಲಾಗಿದೆ. ಅವರ ಜನ್ಮದಿನ ಹಾಗೂ ಪುಣ್ಯ ಸ್ಮರಣೆಯ ದಿನದಂದು ಲಕ್ಷಾಂತರ ಜನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ನೇತ್ರದಾನ, ರಕ್ತದಾನ ಇನ್ನಿತರೆ ಸಾಮಾಜಿಕ ಕಾರ್ಯಗಳು ನಡೆಯುತ್ತವೆ.
Advertisement