
ಬೆಳಗಾವಿ: ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.
ವಿಶ್ವ ಹೃದಯ ದಿನಾಚರಣೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಎಂದು ಘೋಷಣೆ ಮಾಡಿದರು.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸಹಸ್ರಾರು ಜನರ ಜೀವ ಉಳಿಸುವಲ್ಲಿ ಹೃದಯ ಜ್ಯೋತಿ ಯೋಜನೆ ಯಶಸ್ವಿಯಾಗಿದೆ. ಯಾರಿಗೆ ಎದೆ ನೋವು ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡದೇ ಹೃದಯ ಜ್ಯೋತಿ ಯೋಜನೆಯಡಿ ಉಚಿತ ತಪಾಸಣೆ ಮಾಡಿಸಿಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 9,21,020 ಜನರಿಗೆ ಇಸಿಜಿ ಮಾಡಲಾಗಿದೆ. ಈ ಪೈಕಿ 13,515 ಸ್ಟೆಮಿ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಪ್ರಕರಣಗಳು ವರದಿಯಾಗಿವೆ. ಥ್ರೋಂಬೋಲಿಸಿಸ್, ಆಂಜಿಯೋಪ್ಲಾಸ್ಟಿ, ಸ್ಟೆಂಟ್ ಮತ್ತು ಬೈಪಾಸ್ ಸರ್ಜರಿಯಾದ 7,815 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಟೆನೆಕ್ಟೇಪ್ಲೇಸ್ ಚುಚ್ಚುಮದ್ದು ನೀಡುವ ಮೂಲಕ 1,106 ಜನರಿಗೆ ಹಠಾತ್ ಹೃದಯಾಘಾತವಾಗುವುದನ್ನು ತಪ್ಪಿಸಲಾಗಿದೆ. ಯೋಜನೆ ಈಗಾಗಲೇ ಸಾವಿರಾರು ಜೀವಗಳನ್ನು ಉಳಿಸಿದೆ. ಹೀಗಾಗಿ ರಾಜ್ಯವ್ಯಾಪಿ ಯೋಜನೆ ವಿಸ್ತರಣೆಯ ಮೂಲಕ ಹೃದಯ ಸಂಬಂಧಿ ಸಮಸ್ಯೆಯಿಂದ ಎದುರಾಗುವ ಮರಣವನ್ನು ಮತ್ತಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
Advertisement