
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಗೆ ಇಂದು 52ನೇ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಸೆಲೆಬ್ರೇಷನ್ ಜೋರಾಗಿದೆ. ಮಧ್ಯರಾತ್ರಿ 12 ಗಂಟೆಗೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಮಿಡ್‌ನೈಟ್ ಬರ್ತ್‌ಡೇ ಸೆಲೆಬ್ರೇಷನ್ ನಡೆಯಿತು. ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಅಭಿಮಾನಿಗಳ ಜೊತೆ ಮಾತನಾಡಿ, ಅವರಿಗೆ ಕಿವಿಮಾತು ಹೇಳಿ ಖುಷಿಪಟ್ಟಿದ್ದಾರೆ.
ಅಭಿಮಾನಿಗಳಲ್ಲಿ ಮನವಿ
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳ ಅಭಿಮಾನಿಗಳು ಎಂದು ಹೇಳಿಕೊಂಡು ಒಬ್ಬರಿಗೊಬ್ಬರು ಕಾಲೆಳೆಯುವುದು, ನಿಂದಿಸುವುದು, ಪರಸ್ಪರ ಕೊಳಕು ಭಾಷೆಯಲ್ಲಿ ಬೈದುಕೊಳ್ಳುವುದು ಮಾಡುತ್ತಿರುತ್ತಾರೆ. ಇದಕ್ಕೆ ಅಭಿಮಾನಿಗಳಲ್ಲಿ ಕಿಚ್ಚ ಮನವಿ ಮಾಡಿಕೊಂಡಿದ್ದಾರೆ.
ರಿಯಾಕ್ಟ್ ಮಾಡಲು ಹೋಗಬೇಡಿ
ಸೋಷಿಯಲ್ ಮೀಡಿಯಾದಲ್ಲಿ ಯಾರೇ ಏನೇ ಅಂದ್ರೂ ಅಷ್ಟೆ. ಯಾರೇ ಎಷ್ಟೇ ಕೆಟ್ಟದಾಗಿ ಬರೆದರೂ ಅಷ್ಟೇನೆ. ಯಾರೂ ರಿಯಾಕ್ಟ್ ಮಾಡೋದಿಕ್ಕೆ ಹೋಗಬೇಡಿ, ಯಾರೋ ಕಿತ್ತೋದ್ ನನ್ನ ಮಕ್ಕಳ ಬಗ್ಗೆ ಕೇರ್ ಮಾಡ್ಬೇಡಿ. ನಿಮ್ಮನ್ನ ಸಂಪಾದಿಸೋಕೆ ನಾನು 30 ವರ್ಷ ತೆಗೆದುಕೊಂಡಿದ್ದೇನೆ. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ ಎಂದಿದ್ದಾರೆ.
ನೀವೆಲ್ಲ ನಮ್ಮನ್ನ ತುಂಬಾ ಪ್ರೀತಿಸುತ್ತೀರ ಅಂತ ನನಗೆ ತುಂಬಾ ಚೆನ್ನಾಗಿ ಗೊತ್ತು. ಆನ್‌ಲೈನ್‌ನಲ್ಲಿ ಯಾರೇ, ಯಾವುದೇ ಪೇಜ್‌ನಿಂದ ನನಗೆ ಎಷ್ಟೇ ಕೆಟ್ಟದಾಗಿ ಬೈದ್ರು, ದಯವಿಟ್ಟು ನೀವ್ಯಾರು ರಿಯಾಕ್ಟ್ ಮಾಡಬೇಡಿ. ನಮ್ಮ ಸಿನಿಮಾ ಮಾತ್ರ ನಮ್ಮ ಆಸ್ತಿ. ಯಾವ ಪೇಜ್‌ಗೂ ತಲೆಬಾಗಬೇಡಿ, ಯಾವ ಅವಮಾನಕ್ಕೂ ತಲೆಬಾಗಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮನವಿ ಮಾಡಿದರು.
ಈ ಬಾರಿ ಅಪ್ಪನ ಹುಟ್ಟುಹಬ್ಬದ ದಿನ ಅಭಿಮಾನಿಗಳ ಜನಸಾಗರ, ಅವರ ಉದ್ಘೋಷಗಳನ್ನು ಕಣ್ತುಂಬಿಕೊಳ್ಳಲು ಪುತ್ರಿ ಸಾನ್ವಿ ಕಿಚ್ಚ ಸುದೀಪ್ ಜೊತೆ ಬಂದಿದ್ದರು. ಅವರ ಜೊತೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಸೋದರಿ ಪುತ್ರ ಸಂಚಿತ್ ಸಂಜೀವ್ ಭಾಗವಹಿಸಿದ್ದರು. ಅವರಿಬ್ಬರನ್ನೂ ವೇದಿಕೆಗೆ ಕರೆದು ಮಗಳು ಮತ್ತು ಮಗ ಎಂದು ಕಿಚ್ಚ ಸುದೀಪ್ ಪರಿಚಯಿಸಿದರು.
ನಾನು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ನೋ
“ಅದೆಷ್ಟೋ ಅಭಿಮಾನಿ ಸಂಘಗಳು ತುಂಬಾ ಕಡೆ ಒಳ್ಳೆಯ ಕೆಲಸಗಳನ್ನ ಮಾಡಿದ್ದೀರಿ. ನಿಮ್ಮಲ್ಲರಿಗೂ ಧನ್ಯವಾದ. ಒಂದೆರಡು ಕಡೆ ಮನೆ ಕಟ್ಟಿಸಿಕೊಟ್ಟಿದ್ದೀರಿ, ರಕ್ತದಾನ ಮಾಡಿದ್ದೀರಿ. ನನಗೆ ಗೊತ್ತಿಲ್ಲ ನಾನು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ದೇನೆ ಅಂತ. ಆದರೆ ನಿಮ್ಮಂತವರನ್ನ ಪಡೆದಿರುವುದಕ್ಕೆ ಸತ್ಯವಾಗಲೂ ನನಗೆ ಈ ಜನ್ಮದಲ್ಲಿ ಋಣ ತೀರಿಸೋಕೆ ಆಗುವುದಿಲ್ಲ ಎಂದು ಕಿಚ್ಚ ಹೇಳಿದರು.
ವೃತ್ತಿಜೀವನಕ್ಕೆ ಬರುವುದಾದರೆ ಕಿಚ್ಚ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಬಿಗ್ ಬಾಸ್ ಸೀಸನ್ 12ರ ಆರಂಭಕ್ಕೆ ದಿನಗಣನೆ ಶುರುವಾಗಿದೆ.
Advertisement