
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬಳಿಕ, ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗಿರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ಇಳಿಸುವ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿಯು ಒಪ್ಪಿಗೆ ನೀಡಿದೆ. ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.
ಜಿಎಸ್‌ಟಿ ಸುಧಾರಣೆಯಿಂದಾಗಿ ಸಿನಿಮಾ ಟಿಕೆಟ್‌ಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಯಾಗಿದೆ. 100 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಟಿಕೆಟ್‌ಗಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ 12 ರಷ್ಟು ತೆರಿಗೆಯನ್ನು ಶೇ 5ಕ್ಕೆ ಇಳಿಸಲಾಗಿದೆ. ಆದರೆ, 100 ರೂ. ಗಿಂತ ಹೆಚ್ಚಿನ ಟಿಕೆಟ್‌ಗಳಿಗೆ ಶೇ 18ರಷ್ಟು ತೆರಿಗೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕಡಿಮೆ ಬೆಲೆಯ ಟಿಕೆಟ್‌ಗಳ ಮೇಲಿನ ಶೇ 7 ರಷ್ಟು ತೆರಿಗೆ ಕಡಿತವು ದೇಶದಾದ್ಯಂತ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನವನ್ನು ಗಮನಾರ್ಹವಾಗಿ ಅಗ್ಗವಾಗಿಸುವ ನಿರೀಕ್ಷೆಯಿದೆ. ಇದು ಹೆಚ್ಚಿನ ಜನರು ದೊಡ್ಡ ಪರದೆಯತ್ತ ಮರಳಲು ಪ್ರೋತ್ಸಾಹಿಸುತ್ತದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಇದರಿಂದಾಗಿ ನಿರ್ಮಾಪಕರು ಮತ್ತು ವಿತರಕರಿಂದ ಪ್ರದರ್ಶಕರವರೆಗೆ ಹೆಚ್ಚಿನ ಆದಾಯ ಸಿಗುತ್ತದೆ. ತೆರಿಗೆ ಕಡಿತದಿಂದಾಗಿ ಗ್ರಾಮೀಣ ಮತ್ತು ಸಣ್ಣ-ಪಟ್ಟಣಗಳಲ್ಲಿನ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.
ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಇತರ ಪ್ರಾದೇಶಿಕ ಮಾರುಕಟ್ಟೆಗಳನ್ನು ಒಳಗೊಂಡ ಭಾರತೀಯ ಚಲನಚಿತ್ರೋದ್ಯಮವು ಕೋವಿಡ್ ನಂತರ ಚಿತ್ರಮಂದಿರಗಳಿಗೆ ಜನರನ್ನು ಕರೆತರಲು ಹೆಣಗಾಡುತ್ತಿರುವ ಈ ಸಮಯದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ವಾರ್ಷಿಕವಾಗಿ 15,000 ಕೋಟಿ ರೂ. ಗೂ ಹೆಚ್ಚು ಗಳಿಸುವ ಈ ಉದ್ಯಮವು, ಪ್ರೇಕ್ಷಕರು ಅಗ್ಗದಲ್ಲಿ ದೊರೆಯುವ ಪರ್ಯಾಯ ವೀಕ್ಷಣೆಗಳನ್ನು ಆರಿಸಿಕೊಂಡಿದ್ದರಿಂದ ಒಟಿಟಿ ವೇದಿಕೆಗಳು ಮತ್ತು ದೂರದರ್ಶನದಿಂದ ತೀವ್ರ ಸ್ಪರ್ಧೆ ಎದುರಿಸಿದೆ.
ಈಮಧ್ಯೆ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಈ ಹಿಂದೆ ಸರ್ಕಾರವನ್ನು ಶೇ 5 ರ GST ಸ್ಲ್ಯಾಬ್ ಅನ್ನು 300 ರೂ.ವರೆಗಿನ ಟಿಕೆಟ್‌ಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿತ್ತು. ಆದಾಗ್ಯೂ, ಆ ವಿನಂತಿಯನ್ನು GST ಕೌನ್ಸಿಲ್ ಪರಿಗಣಿಸಿಲ್ಲ. ಇದರಿಂದಾಗಿ ಮಲ್ಟಿಪ್ಲೆಕ್ಸ್‌ಗಳು ತೆರಿಗೆ ವಿನಾಯಿತಿಯ ವ್ಯಾಪ್ತಿಯಿಂದ ಹೊರಗಿವೆ.
Advertisement